ನಟಿಯ ಮೇಲಿನ ಹಲ್ಲೆ ಆರೋಪ: ನನ್ನ ಬಂಧನವಾಗಿಲ್ಲ- ಕವಿತಾ ರೆಡ್ಡಿ

ಬೆಂಗಳೂರು, ಸೆ.8: ನಟಿ ಸಂಯುಕ್ತ ಹೆಗಡೆ ಮೇಲಿನ ಹಲ್ಲೆ ಆರೋಪ ಪ್ರಕರಣ ಸಂಬಂಧ ನನ್ನ ಬಂಧನವಾಗಿಲ್ಲ. ಉದ್ದೇಶ ಪೂರಕವಾಗಿಯೇ ನನ್ನನ್ನು ತೇಜೋವಧೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಹೇಳಿದರು.
ಬಂಧನ ಕುರಿತು ವಾರ್ತಾಭಾರತಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಂಗಳವಾರ ಇಲ್ಲಿನ ಎಚ್‍ಎಸ್‍ಆರ್ ಲೇಔಟ್ ಠಾಣಾ ಪೊಲೀಸರು, ಮಾಹಿತಿ ಅನ್ವಯ ಮಾತ್ರ ಠಾಣೆಗೆ ಕರೆದಿದ್ದರು. ತದನಂತರ, ಕೆಲವೇ ಸಮಯದಲ್ಲಿ ಮನೆಗೆ ಮರಳಿದ್ದೇನೆ. ಆದರೆ, ಕೆಲವು ಮಂದಿ ಉದ್ದೇಶ ಪೂರಕವಾಗಿ ನನ್ನ ಬಂಧನವಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಲ್ಲೆ ಆರೋಪ-ಪ್ರತ್ಯಾರೋಪ ಪ್ರಕರಣ ಸಂಬಂಧ ನಟಿ ಸಂಯುಕ್ತ ದೂರನ್ನು ವಾಪಸ್ಸು ಪಡೆದಿದ್ದು, ಇದು ಇತ್ಯರ್ಥಗೊಂಡಿದೆ. ಅಷ್ಟೇ ಅಲ್ಲದೆ, ಈ ವಿಷಯದಲ್ಲಿ ನಾವಿಬ್ಬರೂ ಸುಮ್ಮನಾದರೂ, ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು, ನನ್ನ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿದ್ದಾರೆ ಎಂದರು.
ಏನಿದು ಆರೋಪ?: ಎಚ್‍ಎಸ್‍ಆರ್ ಲೇಔಟ್‍ನ ಅಗರ ಕೆರೆ ಉದ್ಯಾನದಲ್ಲಿ ಇತ್ತೀಚಿಗೆ ವ್ಯಾಯಾಮ ಮಾಡುತ್ತಿದ್ದ ನಟಿ ಸಂಯುಕ್ತ ಹೆಗಡೆ ಅವರ ಮೇಲೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ದೂರು ನೀಡಲಾಗಿತ್ತು.







