ತೈಲ ಟ್ಯಾಂಕರ್‌ನ ಬೆಂಕಿ ನಂದಿಸಲು ಭಾರತದಿಂದ ರಾಸಾಯನಿಕ ಸಾಗಣೆ

ಕೊಲಂಬೊ (ಶ್ರೀಲಂಕಾ), ಸೆ. 8: ಶ್ರೀಲಂಕಾದ ಪೂರ್ವ ಕರಾವಳಿಯ ಹಿಂದೂ ಮಹಾ ಸಾಗರದಲ್ಲಿ ಬೃಹತ್ ತೈಲ ಟ್ಯಾಂಕರ್‌ನಲ್ಲಿ ಹೊಸದಾಗಿ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಭಾರತ ಮಂಗಳವಾರ ಹೆಚ್ಚುವರಿ ಅಗ್ನಿಶಾಶಮಕ ರಾಸಾಯನಿಕಗಳನ್ನು ಕಳುಹಿಸಿದೆ.
‘ನ್ಯೂ ಡೈಮಂಡ್’ ಹಡಗು 2,70,000 ಟನ್ ಕಚ್ಚಾ ತೈಲವನ್ನು ಹೊತ್ತು ಭಾರತದ ಒಡಿಶಾ ರಾಜ್ಯದ ಪಾರಾದೀಪ್ ಬಂದರಿಗೆ ಬರುತ್ತಿದ್ದಾಗ ಕಳೆದ ಗುರುವಾರ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ಬೆಂಕಿಯನ್ನು ನಂದಿಸಿ ಹಡಗು ಭಾರತದತ್ತ ತನ್ನ ಪ್ರಯಾಣವನ್ನು ಮುಂದುವರಿಸುವ ಹಂತದಲ್ಲಿದ್ದಾಗ ಸೋಮವಾರ ಎರಡನೇ ಬಾರಿಗೆ ಅದರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಜೋರು ಗಾಳಿಯಿಂದಾಗಿ ಹಡಗಿನಲ್ಲಿ ಎರಡನೇ ಬಾರಿಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.
ಭಾರತೀಯ ತಟ ರಕ್ಷಣಾ ಪಡೆಯ ಹೆಲಿಕಾಪ್ಟರ್‌ಗಳು ರಾಸಾಯನಿಕ ಪುಡಿಗಳನ್ನು ಸಾಗಿಸಿವೆ.
ಹಡಗಿನಲ್ಲಿ ಕಚ್ಚಾ ತೈಲದ ಜೊತೆಗೆ ಇಂಧನ ರೂಪದಲ್ಲಿ 1,700 ಟನ್ ಡೀಸೆಲ್ ಕೂಡಾ ಇದೆ. ಈವರೆಗೆ ಹಡಗಿನಲ್ಲಿ ಯಾವುದೇ ಸೋರಿಕೆಯ ಲಕ್ಷಣಗಳು ಗೋಚರಿಸಿಲ್ಲ ಎಂದು ಹಡಗಿಗೆ ಭೇಟ ನೀಡಿರುವ ಪರಿಣತರು ಹೇಳಿದ್ದಾರೆ.





