ಮುಡಿಪು: ವಿಶ್ವ ಸಾಕ್ಷರತಾ ದಿನಾಚರಣೆಯ ಅಂಗವಾಗಿ 'ಸಂವಾದ ಸಂಕಲ್ಪ'

ಕೊಣಾಜೆ: ಓರ್ವ ವ್ಯಕ್ತಿ ಅಕ್ಷರ ಕಲಿತ ಕೂಡಲೇ ವಿದ್ಯಾವಂತ ಆಗಲ್ಲ, ನಾವು ಕಲಿತ ಅಕ್ಷರವನ್ನು ಸಮಾಜಕ್ಕೆ ಹೇಗೆ ಹಂಚುತ್ತೇವೆ ಎನ್ನುವುದು ಮುಖ್ಯ ಆಗಿರುವುದರಿಂದ ಅಕ್ಷರದೊಂದಿಗೆ ಬದುಕಿಗೆ ಪೂರಕವಾದ ಜ್ಞಾನಾರ್ಜನೆ ಪಡೆಯುವುದು ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಮಾದರಿ ಗ್ರಾಮ ಅಭಿಯಾನ ಪ್ರಯುಕ್ತ ಜನಶಿಕ್ಷಣ ಟ್ರಸ್ಟ್, ಬಾಳೆಪುಣಿ ಗ್ರಾಮ ಪಂಚಾಯಿತಿ, ಸೆಲ್ಕೋ ಫೌಂಡೇಶನ್, ಅಪ್ನಾದೇಶ್, ಪ್ರಜ್ಞಾ ವೃತ್ತಿಪರ ತರಬೇತಿ ಕೇಂದ್ರ, ಗ್ರಾಮ ವಿಕಾಸ ಕೇಂದ್ರ, ಚಿತ್ತಾರ ಬಳಗ, ಸುಗ್ರಾಮ ವೇದಿಕೆಯ ಸಹಯೋಗದಲ್ಲಿ 'ವಿಶ್ವ ಸಾಕ್ಷರತಾ ದಿನಾಚರಣೆ' ಪ್ರಯುಕ್ತ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆದ 'ಸಂವಾದ-ಸಂಕಲ್ಪ'ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಂವಾದ-ಸಂಕಲ್ಪ'ಕ್ಕೆ ಚಾಲನೆ ನೀಡಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಮಖ್ಯವಾದರೂ ಬದುಕುವ ಶಿಕ್ಷಣ ಅಗತ್ಯ. ಅಭಿವೃದ್ಧಿ ಎನ್ನುವುದು ಸರ್ಕಾರ, ಇಂತಹ ವ್ಯಕ್ತಿಗಳಿಂದಲೇ ಆಗಬೇಕು ಎಂದು ಬಯಸದೆ, ನಿರೀಕ್ಷಿಸದೆ ಸರ್ಕಾರೇತರ ಸಂಸ್ಥೆಗಳೂ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯ ಈಗಾಗಲೇ ಐದು ಗ್ರಾಮಗಳನ್ನು ದತ್ತು ಸ್ವೀಕರಿಸಿದ್ದು, ವಿದ್ಯಾರ್ಥಿಗಳ ನಡೆ ಹಳ್ಳಿಗಳ ಕಡೆ ಎನ್ನುವ ಯೋಜನೆ ಹಮ್ಮಿಕೊಂಡಿದೆ, ಅಲ್ಲದೆ ಹತ್ತು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವ ಯೋಜನೆ ರೂಪಿಸಿ ವಿವಿಯಲ್ಲಿರುವ ಕಂಪ್ಯೂಟರ್ ಹಾಗೂ ಇತರ ಶೈಕ್ಷಣಿಕ ಪರಿಕರಗಳನ್ನು ನೀಡುವ ಯೋಚನೆ ಇದೆ ಎಂದು ಹೇಳಿದರು.
ಉದ್ಯಮಿ ರಮೇಶ್ ಶೇಣವ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್, ಮಾಜಿ ಸದಸ್ಯರಾದ ಜನಾರ್ದನ ಕುಲಾಲ್, ಯಶೋಧಾ, ಸೆಲ್ಕೋ ಪ್ರತಿನಿಧಿಗಳಾದ ಚೇತನ್, ರವೀಣಾ ಬಿ.ಕುಲಾಲ್ ಬೋಳಿಯಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಪ್ರತಿನಿಧಿ ಸೋನಿಯಾ, ಮಣಿಪಾಲ್ ಸಮುದಾಯ ರೇಡಿಯೋ ಮುಖ್ಯಸ್ಥ ಶ್ಯಾಮ್ ಭಟ್ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.
ನಾವು ಕಲಿತ ಅಕ್ಷರವನ್ನು ಸಮಾಜಕ್ಕೆ ಹೇಗೆ ಹಂಚುತ್ತೇವೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಸಮಾಜದ ಅಭಿವೃದ್ಧಿ ಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. - ಡಾ.ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ







