ಹೈಕೋರ್ಟ್ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಪುತ್ತೂರು ಮೂಲದ ಅರುಣ್ ಶ್ಯಾಮ್ ನೇಮಕ

ಬೆಂಗಳೂರು, ಸೆ.8: ಹೈಕೋರ್ಟ್ ಹೆಚ್ಚುವರಿ ಅಡ್ವಕೇಟ್ ಜನರಲ್ ಹುದ್ದೆಗೆ ಪುತ್ತೂರು ಮೂಲದ ಬೆಂಗಳೂರಿನ ಹಿರಿಯ ವಕೀಲ ಅರುಣ್ ಶ್ಯಾಮ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ. ಕಾನೂನು ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಯಾಗಿರುವ ಆದಿ ನಾರಾಯಣರವರು ಈ ಆದೇಶ ಹೊರಡಿಸಿದ್ದಾರೆ. ಅರುಣ್ ಶ್ಯಾಮ್ ಸಹಿತ ಇನ್ನು ಇಬ್ಬರು ನ್ಯಾಯವಾದಿಗಳನ್ನು ಸರಕಾರ ಈ ಹುದ್ದೆಗೆ ನೇಮಕ ಮಾಡಿದೆ.
ವೈ.ಎಚ್.ವಿಜಯಕುಮಾರ್ ಮತ್ತು ದ್ಯಾನ್ ಚಿನ್ನಪ್ಪ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಆಯ್ಕೆಯಾದ ಇತರ ಇಬ್ಬರು ನ್ಯಾಯವಾದಿಗಳು. ಅರುಣ್ ಶ್ಯಾಮ್ ಅವರನ್ನು ಬೆಂಗಳೂರು ಪೀಠದ ಹೆಚ್ಚುವರಿ ಅಡ್ವಕೇಟ್ ಜನರಲ್-1 ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಈ ಹಿಂದೆ ಈ ಸ್ಥಾನವನ್ನು ಅಲಂಕರಿಸಿದ್ದ ಆರ್.ನಟರಾಜ್ ಅವರು ನ್ಯಾಯಾಧೀಶರಾಗಿ ನೇಮಕವಾದ ಹಿನ್ನೆಲೆ ಈ ಸ್ಥಾನ ಖಾಲಿಯಾಗಿತ್ತು. ಸರಕಾರಕ್ಕೆ ಕಾನೂನು ತೊಡಕುಗಳು ಎದುರಾದಾಗ ಅದು ಹೆಚ್ಚುವರಿ ಅಡ್ವಕೇಟ್ ಜನರಲ್‍ಗಳಿಂದ ಸಲಹೆಗಳನ್ನು ಪಡೆಯುತ್ತದೆ.
ಅರುಣ್ ಶ್ಯಾಮ್ ಹಿನ್ನೆಲೆ: ಪುತ್ತೂರಿನವರಾದ ಅರುಣ್ ಶ್ಯಾಮ್, ವಿಟ್ಲದ ಮಾದಕಟ್ಟೆಯಲ್ಲಿ (ಹಿರಿಯ ಪ್ರಾಥಮಿಕ ಶಾಲೆಯಲ್ಲಿ) ಪ್ರಾಥಮಿಕ ಶಿಕ್ಷಣ, ಕಲ್ಲಡ್ಕ (ಶ್ರೀರಾಮ ಪ್ರೌಢ ಶಾಲೆ)ಯಲ್ಲಿ ತಮ್ಮ ಹೈಸ್ಕೂಲ್ ವ್ಯಾಸಂಗ ಪೂರೈಸಿದ್ದಾರೆ. ವಿಟ್ಲದಲ್ಲೇ (ವಿಠಲ ಪದವಿ ಪೂರ್ವ ಕಾಲೇಜು) ಪಿಯುಸಿ ಶಿಕ್ಷಣ ಮುಗಿಸಿದ ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣ ಅಭ್ಯಾಸ ಮಾಡಿದ್ದಾರೆ.
ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಹಾಗೂ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಎಲ್‍ಎಲ್‍ಎಂ ಪದವಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರಿನ ಅಲಯನ್ಸ್ ಯುನಿವರ್ಸಿಟಿಯಲ್ಲಿ ಪಿಎಚ್‍ಡಿ ಅಧ್ಯಯನ ನಡೆಸುತ್ತಿದ್ದಾರೆ. ಇತ್ತೀಚಿಗೆ ಅವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡಿದ್ದರು.







