ಭಾರತಕ್ಕೆ ಮತ್ತೆ ಪ್ರವೇಶಿಸಲಿದೆಯೇ ಪಬ್‌ಜಿ ?

ಹೊಸದಿಲ್ಲಿ, ಸೆ. 8: ಭಾರತ ನಿಷೇಧ ಹೇರಿದ ಬಳಿಕ ಪಬ್‌ಜಿಯ ನಿರ್ಮಾತೃ ಸಂಸ್ಥೆ ದಕ್ಷಿಣ ಕೊರಿಯಾದ ಕಂಪೆನಿಯ ಘಟಕ ‘ಪಬ್‌ಜಿ ಕಾರ್ಪೊರೇಶನ್’ ಭಾರತದಲ್ಲಿ ಪಬ್‌ಜಿ ಮೊಬೈಲ್ ಪ್ರಾಂಚೈಸಿಯ ಹಕ್ಕನ್ನು ಚೀನಾ ಮೂಲದ ಟೆನ್ಸೆಂಟ್ ಗೇಮ್ಸ್‌ಗೆ ನೀಡದಿರಲು ನಿರ್ಧರಿಸಿದೆ. ಇದರಿಂದ ಪಬ್‌ಜಿ ಗೇಮ್ ಮತ್ತೆ ಭಾರತ ಪ್ರವೇಶಿಸುವ ಸಾಧ್ಯತೆ ಇದೆ. ಇನ್ನು ಮುಂದೆ ದೇಶಾದ್ಯಂತ ಪಬ್‌ಜಿ ಗೇಮ್‌ನ ಎಲ್ಲ ಪ್ರಕಟನೆಯ ಜವಾಬ್ದಾರಿಯನ್ನು ‘ಪಬ್‌ಜಿ ಕಾರ್ಪೋರೇಶನ್’ ವಹಿಸಿಕೊಳ್ಳಲಿದೆ.
ಭಾರತ ಸರಕಾರ ಚೀನಾ ಕಂಪೆನಿಗಳನ್ನು ಗುರಿಯಾಗಿರಿಸಿ ಆ್ಯಪ್‌ಗಳನ್ನು ನಿಷೇಧಿಸಿತ್ತು. ಈಗ ಪಬ್‌ಜಿ ದಕ್ಷಿಣ ಕೊರಿಯಾ ಕಂಪೆನಿಯ ತೆಕ್ಕೆಗೆ ಬರುವುದರಿಂದ ಪಬ್‌ಜಿ ಭಾರತಕ್ಕೆ ಮತ್ತೆ ಪ್ರವೇಶಿಸುವ ಸಾಧ್ಯತೆ ಇದೆ. ‘‘ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಪಬ್‌ಜಿ ಕಾರ್ಪೊರೇಶನ್ ಪಬ್‌ಜಿ ಪ್ರಾಂಚೈಸಿ ಹಕ್ಕನ್ನು ಭಾರತದಲ್ಲಿ ಚೀನಾದ ಟೆನ್ಸೆಂಟ್ ಗೇಮ್ಸ್‌ಗೆ ನೀಡದಿರಲು ನಿರ್ಧರಿಸಿದೆ. ಇದಕ್ಕೆ ಬದಲಾಗಿ ಪಬ್‌ಜಿ ಕಾರ್ಪೊರೇಶನ್ ದೇಶದಲ್ಲಿ ಪಬ್‌ಜಿಯ ಎಲ್ಲ ಪ್ರಕಟಣೆ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ’’ ಎಂದು ಪಬ್‌ಜಿ ಕಾರ್ಪೊರೇಶನ್ ಹೇಳಿಕೆಯಲ್ಲಿ ತಿಳಿಸಿದೆ.
ಬಳಕೆದಾರರ ದತ್ತಾಂಶದ ಖಾಸಗಿತನ ಹಾಗೂ ಭದ್ರತೆ ಕಂಪೆನಿಯ ಮೊದಲ ಆದ್ಯತೆ ಆಗಿರುವುದರಿಂದ ಸರಕಾರ ತೆಗೆದುಕೊಂಡ ಕ್ರಮಗಳನ್ನು ಕಾರ್ಪೊರೇಶನ್ ಅರ್ಥ ಮಾಡಿಕೊಂಡಿದೆ ಹಾಗೂ ಗೌರವ ನೀಡಿದೆ ಎಂದು ಅದು ಹೇಳಿದೆ.





