ವಿದೇಶಿ ಪತ್ರಕರ್ತರಿಗೆ ಚೀನಾದಿಂದ ಬೆದರಿಕೆ: ಅಮೆರಿಕ ಆರೋಪ
ಬೀಜಿಂಗ್, ಸೆ. 8: ಚೀನಾವು ವಿದೇಶಿ ಪತ್ರಕರ್ತರನ್ನು ಬೆದರಿಸುತ್ತಿದೆ ಹಾಗೂ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಅಮೆರಿಕ ಮಂಗಳವಾರ ಆರೋಪಿಸಿದೆ. ಅಮೆರಿಕದ ಮಾಧ್ಯಮ ಸಂಸ್ಥೆಗಳ ಹಲವಾರು ಉದ್ಯೋಗಿಗಳ ಪತ್ರಿಕಾ ಪಾಸ್‌ಗಳನ್ನು ನವೀಕರಿಸಲು ಚೀನಾ ನಿರಾಕರಿಸಿದ ಬಳಿಕ ಅಮೆರಿಕ ಈ ಆರೋಪ ಮಾಡಿದೆ.
ವ್ಯಾಪಾರ ಮತ್ತು ತಂತ್ರಜ್ಞಾನ, ಹಾಂಕಾಂಗ್ ಮತ್ತು ಕೊರೋನ ವೈರಸ್‌ಗೆ ಸಂಬಂಧಿಸಿ ಅಮೆರಿಕ ಮತ್ತು ಚೀನಾಗಳ ನಡುವೆ ಏರ್ಪಟ್ಟಿರುವ ಸಂಘರ್ಷದ ಹಿನ್ನೆಲೆಯಲ್ಲಿ ಉಭಯ ದೇಶಗಳು ಪರಸ್ಪರರ ದೇಶದ ಪತ್ರಕರ್ತರ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಚೀನಾವು ಅಮೆರಿಕದ ಹಲವು ಪತ್ರಕರ್ತರನ್ನು ಉಚ್ಚಾಟಿಸಿದೆ.
‘‘ಅಮೆರಿಕ ಮತ್ತು ವಿದೇಶಗಳ ಪತ್ರಕರ್ತರನ್ನು ಬೆದರಿಸುವುದನ್ನು, ಅವರಿಗೆ ಕಿರುಕುಳ ನೀಡುವುದನ್ನು ಹಾಗೂ ಅವರನ್ನು ಉಚ್ಚಾಟಿಸುವುದನ್ನು ಚೀನಾವು ದಶಕಗಳ ಹಿಂದಿನಿಂದಲೇ ನಡೆಸಿಕೊಂಡು ಬಂದಿದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಮೋರ್ಗನ್ ಓರ್ಟಗಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಅವರ ಹೇಳಿಕೆಯನ್ನು ಚೀನಾ ರಾಜಧಾನಿ ಬೀಜಿಂಗ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ಬಿಡುಗಡೆ ಮಾಡಿದೆ.





