ಎನ್‍ಸಿಬಿಎಸ್‍ಗೆ ಕೊರೋನ ಸೋಂಕು ಪತ್ತೆ ಮಾಡುವ ಕಿಟ್ ಉತ್ಪಾದಿಸುವ ಹೊಣೆಗಾರಿಕೆ
ಬೆಂಗಳೂರು, ಸೆ.8: ತ್ವರಿತವಾಗಿ ಕೊರೋನ ಸೋಂಕು ಪತ್ತೆ ಮಾಡಬಹುದಾದ ಕಿಟ್‍ಗಳನ್ನು ಕಡಿಮೆ ವೆಚ್ಚ ಹಾಗೂ ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವಂತಹ ಹೊಣೆಗಾರಿಕೆಯನ್ನು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನಗಳ ಕೇಂದ್ರದ(ಎನ್‍ಸಿಬಿಎಸ್‍ನ) ಅಂಗ ಸಂಸ್ಥೆ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲಾರ್ ಫ್ಲಾಟ್‍ಫಾರ್ಮ್(ಸಿಕ್ಯಾಂಬ್)ಗೆ ದಕ್ಕಿದೆ.
ಅತಿಬೇಗನೆ ಜೊಲ್ಲಿನ ಹನಿಗಳ ಮೂಲಕ ವೈರಾಣು ಪತ್ತೆ ಮಾಡುವಂತ ನೂತನ ತಂತ್ರಜ್ಞಾನ ಸೇರಿ ಆಣ್ವಿಕ(ಮಾಲೆಕ್ಯುಲಾರ್) ಹಾಗೂ ಆರ್‍ಟಿಕ್ಯುಪಿಸಿಆರ್ (ರಿಸರ್ವ್ ಟ್ರಾನ್ಸ್‍ಸ್ಕ್ರಿಪ್ಷನ್) ಮಾದರಿಯಲ್ಲಿ ಕೋವಿಡ್ ದೃಢಪಡಿಸುವ ಕಿಟ್‍ಗಳನ್ನು ಅಭಿವೃದ್ಧಿ ಮಾಡಲಾಗಿದೆ. ಅವುಗಳನ್ನು ತಯಾರಿಸುವ ಯೋಜನೆಗೆ ಮುಂದಿನ ದಿನಗಳಲ್ಲಿ ಬೆಂಗಳೂರು ಕೇಂದ್ರ ಬಿಂದುವಾಗಲಿದೆ. ಸಿಕ್ಯಾಂಪ್ ಹಾಗೂ ಸಣ್ಣ ಉದ್ದಿಮೆಗಳು ಜಂಟಿಯಾಗಿ ಪ್ರತಿದಿನ 10 ಲಕ್ಷ ಕಿಟ್‍ಗಳನ್ನು ಉತ್ಪಾದನೆ ಮಾಡಲಿವೆ.
ರಾಕ್ ಫೆಲ್ಲರ್ ಫೌಂಡೇಷನ್ ಇದಕ್ಕೆ ಹಣಕಾಸು ನೆರವು ನೀಡಿದೆ. ಇದರಿಂದ ದೇಶದ ಮೂಲೆಮೂಲೆಯಲ್ಲೂ ಅತಿ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಕೋವಿಡ್ ಪತ್ತೆ ಮಾಡುವ ಕಿಟ್‍ಗಳು ಲಭ್ಯವಾಗಲಿವೆ. ಕೊರೋನ ವೈರಾಣುವಿಗೆ ಇನ್ನೂ ಪರಿಣಾಮಕಾರಿ ಔಷಧ ಅಥವಾ ಲಸಿಕೆಯನ್ನು ಕಂಡು ಹಿಡಿಯದ ಕಾರಣ ಹೆಚ್ಚು ಹೆಚ್ಚು ಸಂಖ್ಯೆಯ ಜನರನ್ನು ಪರೀಕ್ಷೆಗೆ ಒಳಪಡಿಸಿ, ಪಾಸಿಟಿವ್ ಇರುವವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದೇ ಇರುವ ಏಕೈಕ ಉತ್ತಮದಾರಿ. ಇದರಿಂದ ಸಾಕಷ್ಟು ಜೀವಗಳನ್ನು ಉಳಿಸಬಹುದಾಗಿದೆ ಎಂದು ಎನ್‍ಸಿಬಿಎಸ್ ನಿರ್ದೇಶಕ ಪ್ರೊ.ಸತ್ಯಜಿತ್ ಮೇಯರ್ ತಿಳಿಸಿದ್ದಾರೆ.
ನೂತನ ಯೋಜನೆಗೆ ಇಂಡಿಜಿನೈಸೇಷನ್ ಡಯಾಗ್ನಸ್ಟಿಕ್(ಇನ್‍ಡೆಕ್ಸ್) ಎಂದು ಹೆಸರಿಡಲಾಗಿದ್ದು, ಎನ್‍ಸಿಬಿಎಸ್‍ನ ಅಂಗಸಂಸ್ಥೆ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮಾಲೆಕ್ಯುಲಾರ್ ಪ್ಲಾಟ್‍ಫಾರ್ಮ್ (ಸಿಕ್ಯಾಂಪ್) ಕಿಟ್‍ಗಳ ಮಾದರಿ ಅಭಿವೃದ್ಧಿಪಡಿಸಲಿದೆ ಎಂದು ಅವರು ಹೇಳಿದರು







