ಮಾಧ್ಯಮ ಜಾಗತಿಕವಾಗಬೇಕಿದೆ: ಪ್ರಧಾನಿ

ಹೊಸದಿಲ್ಲಿ, ಸೆ. 8: ಭಾರತದ ಧ್ವನಿ ಹಾಗೂ ಸ್ಥಳೀಯ ಉತ್ಪನ್ನ ಜಾಗತಿಕ ಮಟ್ಟಕ್ಕೆ ಏರುತ್ತಿರುವ ಇಂದಿನ ದಿನಗಳಲ್ಲಿ ದೇಶದ ಮಾಧ್ಯಮ ಕೂಡ ಜಾಗತಿಕ ಮಟ್ಟಕ್ಕೆ ಏರುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಜೈಪುರದಲ್ಲಿ ಪತ್ರಿಕಾ ಗೇಟ್ ಉದ್ಘಾಟಿಸಿ ಹಾಗೂ ಪತ್ರಿಕಾ ಸಮೂಹದ ಅಧ್ಯಕ್ಷ ಗುಲಾಬ್ ಕೊಠಾರಿ ಅವರ ಎರಡು ಪುಸ್ತಕಗಳನ್ನು ವೀಡಿಯೊ ಕಾನ್ಫೆರನ್ಸ್ ಮೂಲಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಭಾರತದ ಸ್ಥಳೀಯ ಉತ್ಪನ್ನ ಜಾಗತಿಕವಾಗುತ್ತಿದೆ. ಭಾರತದ ಧ್ವನಿ ಕೂಡ ಇನ್ನಷ್ಟು ಜಾಗತಿಕವಾಗುತ್ತಿದೆ. ಜಗತ್ತು ಭಾರತವನ್ನು ತೀವ್ರವಾಗಿ ಆಲಿಸುತ್ತಿದೆ. ಪ್ರತಿಯೊಂದು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾರತ ಪ್ರಬಲ ಉಪಸ್ಥಿತಿ ಹೊಂದಿದೆ. ಇಂತಹ ಸಂದರ್ಭದಲ್ಲಿ ಭಾರತದ ಮಾಧ್ಯಮ ಕೂಡ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಅವರು ಹೇಳಿದರು.
ನಮ್ಮ ದಿನಪತ್ರಿಕೆ ಹಾಗೂ ಮ್ಯಾಗಝಿನ್‌ಗಳು ಜಾಗತಿಕ ಖ್ಯಾತಿ ಹೊಂದಬೇಕು. ಡಿಜಿಟಿಲ್ ಯುಗದಲ್ಲಿ ನಾವು ಜಗತ್ತಿನಾದ್ಯಂತ ಡಿಜಿಟಲ್ ಆಗಿ ತಲುಪಬೇಕು. ಜಗತ್ತಿನ ವಿವಿಧ ಭಾಗಗಳಲ್ಲಿ ನೀಡುವಂತೆ ನಾವು ಕೂಡ ಸಾಹಿತ್ಯಕ ಪ್ರಶಸ್ತಿಗಳನ್ನು ನೀಡಬೇಕು. ಇದು ದೇಶದ ಇಂದಿನ ಅಗತ್ಯ ಎಂದು ಅವರು ಹೇಳಿದರು. ಕೊರೋನ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ, ಸರಕಾರಿ ಕಾರ್ಯಕ್ರಮಗಳನ್ನು ವಿಶ್ಲೇಷಿಸುವ ಹಾಗೂ ನ್ಯೂನತೆಗಳನ್ನು ಎತ್ತಿ ತೋರಿಸುವ ಮೂಲಕ ದೇಶದ ಮಾಧ್ಯಮ ಜನರಿಗೆ ಅಭೂತಪೂರ್ವ ಸೇವೆ ಸಲ್ಲಿಸುತ್ತಿದೆ ಎಂದು ಪ್ರಧಾನಿ ಅವರು ತಿಳಿಸಿದರು. ಸಾಮಾಜಿಕ ಮಾಧ್ಯಮ ಪ್ರಮುಖವಾಗಿರುವ ಈ ಯುಗದಲ್ಲಿ ಕೆಲವೊಮ್ಮೆ ಪತ್ರಿಕೆಗಳನ್ನು ಕೂಡ ಟೀಕಿಸಲಾಗುತ್ತಿದೆ. ವಿಮರ್ಶೆಯಿಂದ ಪ್ರತಿಯೊಬ್ಬರೂ ಕಲಿಯುವ ಅಗತ್ಯ ಇದೆ. ಇದು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಶೌಚಾಲಯ ನಿರ್ಮಾಣ ಅಭಿಯಾನ, ಸ್ವಚ್ಚ ಭಾರತ್ ಅಭಿಯಾನ, ಉಜ್ವಲ ಯೋಜನೆ, ಬಡ ಮಹಿಳೆಯರಿಗೆ ಅಡುಗೆ ಅನಿಲದ ಸಿಲಿಂಡರ್ ನೀಡುವ ಯೋಜನೆ ಅಥವಾ ನಳ್ಳಿ ನೀರು ಪೂರೈಸುವ ಯೋಜನೆ ಯಾವುದೇ ಆಗಿರಲಿ ಮಾಧ್ಯಮಗಳು ಜಾಗೃತಿ ಮೂಡಿಸುವಲ್ಲಿ ಉತ್ತಮ ಕೆಲಸ ಮಾಡಿವೆ ಎಂದು ಪ್ರಧಾನಿ ತಿಳಿಸಿದರು.
‘ಸಂವಾದ ಉಪನಿಷದ್’ ಹಾಗೂ ‘ಅಕ್ಷರ ಯಾತ್ರೆ’ ಕೃತಿಗಳ ಮೂಲಕ ಭಾರತದ ಸಂಸ್ಕೃತಿ, ಸಂಪ್ರದಾಯ ಹಾಗೂ ತತ್ವಶಾಸ್ತ್ರವನ್ನು ಸಂರಕ್ಷಿಸುವ ಹಾಗೂ ಪ್ರೇರೇಪಿಸುವ ಕೊಠಾರಿ ಅವರ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ, ಪ್ರಸಕ್ತ ತಲೆಮಾರಿನ ಓದು ಗೂಗಲ್ ಗುರುವನ್ನು ಅವಲಂಬಿಸಿದೆ ಎಂದರು.







