ಖಾಸಗಿ ಶಾಲೆಗಳಿಂದ ಶುಲ್ಕ ಪಾವತಿಸಲು ಸೂಚನೆ

ಬೆಂಗಳೂರು, ಸೆ.8: ರಾಜ್ಯ ಸರಕಾರ 2020-21 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸಿ ಪಾಲಕರಿಂದ ಮೊದಲ ಕಂತಿನ ಶುಲ್ಕ ಪಡೆಯಲು ಆದೇಶಿಸಿದ ಬೆನ್ನಲ್ಲೇ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪಾಲಕರಿಗೆ ಸಂದೇಶ ರವಾನೆ ಮಾಡಿ ಶುಲ್ಕ ಪಾವತಿಗೆ ಸೂಚನೆ ನೀಡುತ್ತಿವೆ.
ಶುಲ್ಕ ಪಾವತಿಸದಿದ್ದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡುವುದಿಲ್ಲ ಎಂದು ವಾರ್ನಿಂಗ್ ನೀಡುತ್ತಿದ್ದಾರೆಂದು ಮೂಲಗಳು ತಿಳಿದುಬಂದಿದೆ. ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಪ್ರಮೋಟ್ ಮಾಡುವುದಿಲ್ಲ ಎನ್ನುವುದು ಸಲ್ಲ. ಈ ಬಗ್ಗೆ ಇಲಾಖೆಗೆ ಪಾಲಕರು ದೂರು ನೀಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊರೋನ ಪರಿಸ್ಥಿತಿಯಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಿಬ್ಬಂದಿಗೆ ವೇತನ ನೀಡುವುದು ಕಷ್ಟವಾಗಿದೆ. ಈ ವೇಳೆ ಪಾಲಕರು ಶುಲ್ಕ ಪಾವತಿಸದಿದ್ದರಿಂದ ಶಾಲೆಯನ್ನು ಮುಚ್ಚುವ ಸ್ಥಿತಿಗೆ ತಲುಪಿವೆ. ಈ ಹಿನ್ನೆಲೆಯಲ್ಲಿ ಪಾಲಕರಿಂದ ಶುಲ್ಕ ಪಡೆಯಲು ಇಲಾಖೆ ಅವಕಾಶ ನೀಡಿದೆ.
ಪೂರ್ತಿ ಶುಲ್ಕಕ್ಕೆ ವಿರೋಧ: ಶಿಕ್ಷಣ ಇಲಾಖೆಯ ಆದೇಶದ ಪ್ರಕಾಶ ಸೆ.30 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಆದರೆ, ಶಾಲೆ ಎಂದಿನಿಂದ ಆರಂಭವಾಗಲಿದೆ ಎಂಬುದನ್ನು ತಿಳಿಸಿಲ್ಲ. ನಾವು ಈಗಾಗಲೇ ಕಷ್ಟದಲ್ಲಿದ್ದೇವೆ, ಶಾಲೆ ಆರಂಭಿಸುವ ಬಗ್ಗೆ ಮಾಹಿತಿ ಇಲ್ಲದೇ ಶುಲ್ಕ ಪಾವತಿ ಎಂದರೆ ಹೇಗೆ? ಈ ಬಾರಿ ಶೈಕ್ಷಣಿಕ ವರ್ಷ ಕಡಿತವಾಗುವುದರಿಂದ ಪಠ್ಯಪುಸ್ತಕದಲ್ಲಿ ಅಧ್ಯಯನಗಳನ್ನು ಕಡಿತ ಮಾಡಿದ ರೀತಿಯಲ್ಲಿ ನಮಗೂ ಶುಲ್ಕ ಕಡಿತ ಮಾಡಬೇಕು. ಸಂಪೂರ್ಣ ಒಂದು ವರ್ಷದ ಶುಲ್ಕ ಪಡೆಯುವ ಬದಲು ಮುಂದೆ ದೊರೆಯುವ ತಿಂಗಳಿಗೆ ಅನುಗುಣವಾಗಿ ಶುಲ್ಕ ಪಡೆಯಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.







