ಕೇಂದ್ರ ಸರಕಾರದಿಂದ ಅಮೆರಿಕ ಮೂಲದ ‘ಸಿಖ್ ಫಾರ್ ಜಸ್ಟಿಸ್’ ನಾಯಕನ ಸೊತ್ತು ಮುಟ್ಟುಗೋಲು
ಹೊಸದಿಲ್ಲಿ, ಸೆ. 8: ಅಮೆರಿಕ ಮೂಲದ ‘ಸಿಖ್ ಫಾರ್ ಜಸ್ಟಿಸ್’ (ಎಸ್‌ಎಫ್‌ಜೆ)ನ ನಾಯಕ ಹಾಗೂ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಅವರ ಸೊತ್ತನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಕೇಂದ್ರ ಸರಕಾರ ಮಂಗಳವಾರ ಆದೇಶಿಸಿದೆ. ಕಳೆದ ವರ್ಷ ತಿದ್ದುಪಡಿ ಮಾಡಿದ ಬಳಿ ಯುಎಪಿಎ ಕಾಯ್ದೆ ಅಡಿಯಲ್ಲಿ ಕೇಂದ್ರ ಸರಕಾರ ಸೊತ್ತು ಮುಟ್ಟುಗೋಲು ಹಾಕಿಕೊಳ್ಳುವುದು ಇದೇ ಮೊದಲು.
8 ಮಂದಿಯೊಂದಿಗೆ ಪನ್ನುನ್ ಅವರನ್ನು ಕೇಂದ್ರ ಗೃಹ ಸಚಿವಾಲಯ ಈ ವರ್ಷ ಜುಲೈಯಲ್ಲಿ ಭಯೋತ್ಪಾದಕರು ಎಂದು ಘೋಷಿಸಿತ್ತು. ಪನ್ನುನ್ ಭಾರತದ ವಿರುದ್ಧ ಅಭಿಯಾನ ನಡೆಸುತ್ತಿದ್ದಾರೆ. ಅಲ್ಲದೆ, ತನ್ನ ತಾಯ್ನಾಡಾದ ಪಂಜಾಬ್‌ನಲ್ಲಿ ಸಿಖ್ ಯುವಕರನ್ನು ಸಂಘಟಿಸುತ್ತಿದ್ದಾರೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇತರರನ್ನು ಯುಎಪಿಎ ಕಾಯ್ದೆ ಅಡಿಯಲ್ಲಿ ಸ್ವತಂತ್ರ ಭಯೋತ್ಪಾದಕರು ಎಂದು ಗುರುತಿಸಲಾಗಿದೆ.
ಇವರಲ್ಲಿ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಪರಂಜೀತ್ ಸಿಂಗ್, ಖಲಿಸ್ತಾನ್ ಟೈಗರ್ ಫೋರ್ಸ್‌ನ ಹರ್ದೀಪ್ ಸಿಂಗ್ ನಿಜ್ಜಾರ್, ಖಲಿಸ್ತಾನ ಝಿಂದಾಬಾದ್ ಫೋರ್ಸ್‌ನ ಗುರ್ಮೀತ್ ಸಿಂಗ್ ಬಗ್ಗಾ ಹಾಗೂ ರಣಜೀತ್ ಸಿಂಗ್ ಸೇರಿದ್ದಾರೆ. ಪಂಜಾಬ್‌ನ ಅಮೃತಸರದಲ್ಲಿ ಇರುವ ಪನ್ನುನ್ ಹಾಗೂ ಜಲಲಾಂಧರ್‌ನಲ್ಲಿರುವ ನಿಜ್ಜಾರ್‌ನ ಸೊತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರಕಾರದ ಆದೇಶ ಹೇಳಿದೆ.







