ತೇಜಸ್ವಿ ಹುಟ್ಟುಹಬ್ಬ: ಹದ್ದುಗಳ ಛಾಯಾಚಿತ್ರ-ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು, ಸೆ.8: ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಸೇರಿ ಪ್ರತಿ ವರ್ಷದಂತೆ ಈ ಬಾರಿಯೂ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ 83 ನೇ ಹುಟ್ಟುಹಬ್ಬದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ 'ಹದ್ದುಗಳ ಅದ್ಭುತ ಲೋಕ' ಹಾಗೂ ಕೊರೋನ ಲೋಕ' ಶೀರ್ಷಿಕೆಯಡಿ ಛಾಯಾಚಿತ್ರ-ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿದ್ದು, ಪ್ರದರ್ಶನವನ್ನು ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಉದ್ಘಾಟಿಸಿದರು.
ಹುಲ್ಲುಗಾವಲು ಹದ್ದು, ಗರುಡ, ಗುಡ್ಡದರಣಹದ್ದು, ಬಿಳಿ ಗರುಡ, ಕಪ್ಪುಹದ್ದು, ಬಿಳಿ ಕಣ್ಣಿನ ಬಜಾರ್ಡ್, ಕೆಂಪು ತಲೆಯರಣಹದ್ದು, ಅಮೂರ್ ಫಾಲ್ಕನ್, ಬಿಳಿ ಹೊಟ್ಟೆಯ ಸಮುದ್ರದ ಹದ್ದು, ಬೂದುತಲೆಯ ಮೀನು ಹದ್ದು, ಉದ್ದ ಕಾಲುಳ್ಳ ಬಜಾರ್ಡ್ ಹದ್ದು ಹೀಗೆ ಹಲವು ಬಗೆಯ ಸುಮಾರು 68 ಬಗೆಯ ಹದ್ದುಗಳಿದ್ದು, ಇವು ಛಾಯಾಚಿತ್ರದ ರೂಪದಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಕೊರೋನ ಸೋಂಕಿನಂತಹ ರೋಗದಿಂದ ಹೈರಾಣಾಗಿರುವ ಮನುಕುಲವು ತಾನೇ ಮಹಾಮಾರಿಯಾಗಿ ಭೂಮಿಯಜೀವ ಲೋಕಕ್ಕೆ ಒಡ್ಡಿರುವ ಗಂಡಾಂತರದಿಂದ ಅಳಿವಿನಂಚಿಗೆ ಬಂದು ನಮ್ಮಿಂದ ಶಾಶ್ವತವಾಗಿ ನಿರ್ಗಮಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ‘ಹದ್ದು ಮತ್ತುರಣ ಹದ್ದು’ಗಳಂತಹ ಜೀವಿಗಳ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳುವ ನಿಟ್ಟಿನಲ್ಲಿ ‘ಹದ್ದುಗಳ ಅದ್ಭುತ ಲೋಕ’ ಹಾಗೂ ‘ಕೊರೊನ ಲೋಕ’ ಕುರಿತು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ಈ ಸಂಬಂಧ ಪರಿಸರ ಸಂಸ್ಥೆಯ ಕಾರ್ಯದರ್ಶಿ ಈಶ್ವರ್ ಪ್ರಸಾದ್ ಮಾತನಾಡಿ, ಭಾರತದಲ್ಲಿ ಸುಮಾರು 74 ಜಾತಿಯ ಹದ್ದುಗಳಿವೆ. ನಮಗೆ ಈ ಪೈಕಿ 68 ಜಾತಿಯ ಹದ್ದುಗಳ ಫೋಟೊಗಳು ಸಿಕ್ಕಿವೆ. ಅವುಗಳ ನಾನಾ ಭಂಗಿಗಳ 95 ಚಿತ್ರಗಳನ್ನು ಪ್ರದರ್ಶಿಸಿದ್ದೇವೆ. ಇದಲ್ಲದೆ ಮಾನವರನ್ನು ಈವರೆಗೆ ಕಾಡಿದ ಹಾಗೂ ಈಗ ಕಾಡುತ್ತಿರುವ ಕೊರೋನ ಸೇರಿದಂತೆ 12 ಬಗೆಯ ವೈರಸ್‍ಗಳಿವೆ. ಇವುಗಳನ್ನೂ ಪ್ರದರ್ಶಿಸಲಾಗಿದೆ. ಇವೆಲ್ಲವೂ ನೈಜ ಚಿತ್ರಗಳಾಗಿದ್ದು, ಸೆ. 15 ರವರೆಗೆ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.
ಚಿತ್ರಕಲಾ ಪರಿಷತ್‍ನಲ್ಲಿ ಆಯೋಜಿಸಿರುವ ಈ ಪ್ರದರ್ಶನದ ವೀಕ್ಷಣೆಗೆ ಬರುವ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿರಬೇಕು. ಸ್ಯಾನಿಟೈಸರ್ ವ್ಯವಸ್ಥೆಯೂ ಇದೆ. ಮೊದಲ ದಿನ ಪ್ರದರ್ಶನ ವೀಕ್ಷಣೆಗೆ ಬಂದ ಎಲ್ಲರಿಗೂ ಆರೋಗ್ಯ ಪೂರಕವಾದ ಗಂಜಿಯನ್ನು ವಿತರಿಸಿದ್ದು ವಿಶೇಷವಾಗಿತ್ತು.
ಸಂವಾದ ಕಾರ್ಯಕ್ರಮಗಳ ಆಯೋಜನೆ: ಪ್ರತಿದಿನ ಬೆಳಗ್ಗೆ 11.30ರಿಂದ ತಜ್ಞರೊಡನೆ ಸಂವಾದ ಹಾಗೂ ಸಾಕ್ಷ್ಯಚಿತ್ರಗಳ ಪ್ರದರ್ಶನವಿರುತ್ತದೆ. ದೂರದ ಊರುಗಳಲ್ಲಿರುವವರು ಝೂಮ್ ಮೂಲಕ ವರ್ಚುಯಲ್ ಕಾರ್ಯಕ್ರಮದಲ್ಲೂ ಭಾಗವಹಿಸಬಹುದು.
.jpg)







