ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ ಆಯ್ಕೆ
ಬೆಂಗಳೂರು, ಸೆ.9: 2020ನೇ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಕೊಡಮಾಡುವ ನೃಪತುಂಗ ಸಾಹಿತ್ಯ ಪ್ರಶಸ್ತಿಗೆ ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರ ಆಯ್ಕೆಯಾಗಿದ್ದಾರೆ. ಹಾಗೂ ಮಯೂರವರ್ಮ ಸಾಹಿತ್ಯ ಪ್ರಶಸ್ತಿಗೆ ಧನಂಜಯ ಕುಂಬ್ಳೆ, ಅಕ್ಷತಾ ಕೃಷ್ಣಮೂರ್ತಿ ಸೇರಿ ಐವರನ್ನು ಆಯ್ಕೆ ಮಾಡಲಾಗಿದೆ.
ಬುಧವಾರ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ನೃಪತುಂಗ ಪ್ರಶಸ್ತಿಗೆ ಡಾ.ಜಿ.ಎಸ್.ಆಮೂರರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಏಳು ಲಕ್ಷ ರೂ. ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಮಯೂರವರ್ಮ ಸಾಹಿತ್ಯ ಪ್ರಶಸ್ತಿ: ನೃಪತುಂಗ ಸಾಹಿತ್ಯ ಪ್ರಶಸ್ತಿಯ ಜತೆಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸಾಧನೆ ಮಾಡಿದ 45 ವರ್ಷದೊಳಗಿನ ಯುವ ಸಾಹಿತಿಗಳಿಗೆ ಕೊಡಮಾಡುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಯುವ ಸಾಹಿತಿಗಳಾದ ಧನಂಜಯ ಕುಂಬ್ಳೆ, ಅಕ್ಷತಾ ಕೃಷ್ಣಮೂರ್ತಿ, ಡಾ.ಸಂತೋಷ ಹಾನಗಲ್ಲ, ವನಿತಾ ಎನ್.ಶೇಟ್ ಹಾಗೂ ಆರ್.ಪ್ರಭಾಕರ್ ಆಯ್ಕೆಯಾಗಿದ್ದಾರೆ. ಇವರಿಗೆ 25 ಸಾವಿರ ರೂ.ನಗದು, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿ ಹಿರಿಯ ಚುಟುಕು ಕವಿ ಜರಗನಹಳ್ಳಿ ಶಿವಶಂಕರ್, ವಿಮರ್ಶಕ ಡಾ.ಎಸ್.ಆರ್.ವಿಜಯಶಂಕರ್, ಬಿಎಂಟಿಸಿಯ ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಮುಹಮ್ಮದ್ ಹಫೀಝುಲ್ಲಾ, ಉಪ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಮಥುರಾ ರಾಡ್ರಿಕ್ಸ್, ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಇದ್ದರು.