ಹಿಂದೂಗಳೆಲ್ಲಾ ಒಳ್ಳೆಯವರಲ್ಲ, ಮುಸ್ಲಿಮರೆಲ್ಲಾ ಕೆಟ್ಟವರಲ್ಲ: ಸಚಿವ ವಿ. ಸೋಮಣ್ಣ

ಬೆಂಗಳೂರು, ಸೆ.10: ಹಿಂದೂಗಳೆಲ್ಲಾ ಒಳ್ಳೆಯವರಲ್ಲ, ಮುಸ್ಲಿಮರೆಲ್ಲಾ ಕೆಟ್ಟವರಲ್ಲ. ಎಲ್ಲಾ ಜಾತಿ ಧರ್ಮಗಳಲ್ಲೂ ಒಳ್ಳೆಯವರು, ಕೆಟ್ಟವರು ಇರುತ್ತಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್ ನಲ್ಲಿ ಈದ್ಗಾ ಮೈದಾನ ಕಾಂಪೌಂಡ್ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಕೆಲಸಕ್ಕೂ ಜಾತಿ-ಧರ್ಮಕ್ಕೂ ಸಂಬಂಧವಿಲ್ಲ, ಇದು ನನ್ನ ಕರ್ತವ್ಯ. ಒಬ್ಬ ಜನಪ್ರತಿನಿಧಿಯಾಗಿ ನಾನು ನನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ ಎಂದರು.
ನಾವು ಭಾರತೀಯರು, ಹಿಂದೂ-ಮುಸ್ಲಿಮರು ಒಂದೇ ಮನೆಯವರು. ನೀವು ಅಲ್ಲಾಹ್ ಅಂತೀರಾ, ನಾವು ಶಿವ ಅಂತೀವಿ. ಎಲ್ಲರಿಗೂ ದೇವರೊಬ್ಬನೇ ಎಂದರು.
ಕೊರೋನದಿಂದಾಗಿ ಸಾಮಾನ್ಯ ಬಡವ ಕಳೆದ ಐದು ತಿಂಗಳಿನಿಂದ ಕಂಗಾಲಾಗಿದ್ದಾನೆ. ಕಾಂಗ್ರೆಸ್‍ನವರು 75 ವರ್ಷಗಳಿಂದ ಮುಸ್ಲಿಮರನ್ನು ವೋಟ್ ಬ್ಯಾಂಕ್‍ಗಾಗಿ ಬಳಸಿಕೊಂಡಿದ್ದಾರೆ, ಈಗಲೂ ಬಳಸಿಕೊಳ್ಳುತ್ತಿದ್ದಾರೆ. ಇನ್ನು ಎಷ್ಟು ವರ್ಷ ನೀವು ಮೋಸ ಹೋಗುತ್ತೀರ ? ನಾನು ಯಾವತ್ತಾದರೂ ಅನ್ಯಾಯ ಮಾಡಿದ್ದೇನಾ ಎಂದು ಪ್ರಶ್ನೆ ಮಾಡಿದರು.
ಈ ಪ್ರದೇಶದ ಬಡವರಿಗಾಗಿ ಒಂದು ಸಾವಿರ ಮನೆಗಳನ್ನು ಕಟ್ಟಿಕೊಡುತ್ತಿದ್ದೇನೆ. ನನ್ನ ಬೆಂಬಲಿಸದಿದ್ದರೂ ಪರವಾಗಿಲ್ಲ. ಆದರೆ ನನ್ನ ವಿರುದ್ಧ ಸುಮ್ಮನೆ ಅಪಪ್ರಚಾರ ಮಾಡಬೇಡಿ. ನಾನು ಬಸವ ತತ್ವದಲ್ಲಿ ನಂಬಿಕೆಯನ್ನಿಟ್ಟುಕೊಂಡು ಅದರಂತೆ ನಡೆಯುತ್ತಿರುವ ವ್ಯಕ್ತಿ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು, ನೀವು ಬೆಂಬಲಿಸದಿದ್ದರೂ ನಾನು ನಿಮ್ಮ ಸೇವೆ ಮಾಡುತ್ತೇನೆ. ಈ ಈದ್ಗಾ ಮೈದಾನವನ್ನು ಆರು ತಿಂಗಳಿನಲ್ಲಿ ಕಟ್ಟಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮಕ್ಕೆ ಶಾಸಕ ಝಮೀರ್ ಅವರನ್ನು ಕರೆದುಕೊಂಡು ಬರಬೇಕು ಅಂದುಕೊಂಡಿದ್ದೆ. ಆದರೆ ಅವರು ಬರಲಿಲ್ಲ. ಅವನು ನನ್ನ ಆತ್ಮೀಯ, ಅವನು ದಡ್ಡ ಅಲ್ಲ, ಕಿಲಾಡಿ. ಝಮೀರ್ ಕೇವಲ ಮುಸ್ಲಿಮರ ಶಾಸಕನಲ್ಲ, ಎಲ್ಲಾ ವರ್ಗದವರ ಶಾಸಕ ಎಂದರು.







