ವ್ಯಕ್ತಿಯ ಕಾರಣಕ್ಕಾಗಿ ಅಲ್ಲ, ನ್ಯಾಯಕ್ಕಾಗಿ ಹೋರಾಟ: ಪ್ರೊ. ಫಣಿರಾಜ್
ದುವರ್ತನೆ ತೋರಿದ ಆರೋಪ, ಕೊಪ್ಪ ಪೊಲೀಸರ ಅಮಾನತಿಗೆ ಆಗ್ರಹಿಸಿ ಧರಣಿ

ಉಡುಪಿ, ಸೆ.10: ಸಾಮಾಜಿಕ ಹೋರಾಟಗಾರ ಹಾಗೂ ಚಿಂತಕ ಕೆ.ಎಲ್. ಅಶೋಕ್ ಅವರಿಗೆ ಕ್ಷುಲ್ಲಕ ಕಾರಣಕ್ಕೆ ಅವಮಾನಿಸಿ ಕಿರುಕುಳ ನೀಡಿದ ಕೊಪ್ಪ ಪೋಲಿಸರ ಅಮಾನತುಗೊಳಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾದಲಿತ ದಮನಿತ ಹಿಂದುಳಿದ ವರ್ಗಗಳ ಸ್ವಾಭಿಮಾನಿ ಹೋರಾಟ ಸಮಿತಿಯ ನೇತೃತ್ವ ದಲ್ಲಿ ಗುರುವಾರ ಧರಣಿ ನಡೆಸಲಾಯಿತು.
ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ನಡೆದ ಧರಣಿಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಫಣಿರಾಜ್, ಕಾನೂನು ಬದ್ಧವಾಗಿ ನಡೆದುಕೊಂಡ ಒಬ್ಬ ನಾಗರಿಕನಿಗೆ ಪೊಲೀಸರು ಈ ರೀತಿ ಅವಮಾನ ಹಾಗೂ ಕಿರುಕುಳ ನೀಡಿ ರುವುದು ಪೊಲೀಸರ ದುವರ್ತನೆ, ಅಧಿಕಾರದ ದುರುಪಯೋಗ ಹಾಗೂ ಭ್ರಷ್ಟಾಚಾರವನ್ನು ತೋರಿಸುತ್ತದೆ. ಆದುದರಿಂದ ಇದು ಒಬ್ಬ ವ್ಯಕ್ತಿಯ ಬದಲು ನ್ಯಾಯದ ಕಾರಣಕ್ಕೆ ಮಾಡುತ್ತಿರುವ ಹೋರಾಟವಾಗಿದೆ ಎಂದರು.
ನಾಗರಿಕರಿಗೆ ರಕ್ಷಣೆ ಕೊಡುವುದು ಪೊಲೀಸರ ಜವಾಬ್ದಾರಿಯಾಗಿದೆ. ಅದೇ ರೀತಿ ನಾಗರಿಕರು ಕಾನೂನಿಗೆ ಗೌರವ ಕೊಡುವ ಕೆಲಸ ಮಾಡ ಬೇಕು. ಆದರೆ ಯಾವುದೇ ಕಾರಣಕ್ಕೂ ನಾವು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಕಾನೂನು ಮತ್ತು ಸಂವಿಧಾನವನ್ನು ರಕ್ಷಣೆ ಮಾಡಬೇಕಾದ ಪೊಲೀಸರೇ ಅದನ್ನು ಉಲ್ಲಂಘಿಸಿದಾಗ ನಾಗರಿಕರಾದ ನಾವು ಅದನ್ನು ರಕ್ಷಣೆ ಮಾಡುವ ಕೆಲಸ ಮಾಡ ಬೇಕು. ಈ ಪ್ರಕರಣದ ಬಗ್ಗೆ ಇಲಾಖಾ ತನಿಖೆ ಮಾಡಬೇಕು, ಪೊಲೀಸ್ ಪೇದೆ ಹಾಗೂ ಎಸ್ಸೈಯನ್ನು ಅಮಾನತು ಮಾಡಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಅವರು ತಿಳಿಸಿದರು.
ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಒಂದೆಡೆ ಕ್ಷುಲ್ಲಕ ಕಾರಣ ಕ್ಕಾಗಿ ಸಾಮಾಜಿಕ ಹೋರಾಟಗಾರನ ಮೇಲೆ ದೌರ್ಜನ್ಯ ಎಸಗುವ ಪೊಲೀಸರು, ಇನ್ನೊಂದೆಡೆ ದನ ಸಾಗಾಟ ಆರೋಪದಲ್ಲಿ ಕಾರ್ಕಳದ ಈದುವಿನ ಗ್ರಾಮಸ್ಥರ ಮೇಲೆ ಪದೇ ಪದೇ ಹಲ್ಲೆ ನಡೆಸುವ ಬಜರಂಗ ದಳದ ಕಾರ್ಯಕರ್ತರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್, ಸಮಿತಿಯ ಅಧ್ಯಕ್ಷ ಶ್ಯಾಮ್‌ರಾಜ್ ಬಿರ್ತಿ, ಸಂಚಾಲಕ ಹುಸೇನ್ ಕೋಡಿ ಬೆಂಗ್ರೆ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ವಿವಿಧ ಸಂಘಟನೆಗಳ ಪ್ರಮುಖ ರಾದ ಪ್ರೊ.ಸಿರಿಲ್ ಮಥಾಯಸ್, ಶಂಕರ್‌ದಾಸ್ ಚೇಂಡ್ಕಳ, ಅಝೀಝ್ ಉದ್ಯಾವರ, ಸಲಾವುದ್ದೀನ್, ನಾಸೀರ್ ಹೂಡೆ ಮತ್ತಿತ್ತರರು ಉಪಸ್ಥಿತರಿದ್ದರು.







