ಆಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗೆಂದು ಕರೆದೊಯ್ದ ಕೊರೋನ ಸೋಂಕಿತ ಮಹಿಳೆ ನಾಪತ್ತೆ: ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.10: ಚಿಕಿತ್ಸೆಗೆಂದು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ದು ಕೊರೋನ ಸೋಂಕಿತ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ದೂರು ನೀಡಿದ್ದಾರೆ.
ಬೊಮ್ಮನಹಳ್ಳಿ ವಲಯದಲ್ಲಿ ಸೆಪ್ಟೆಂಬರ್ ಮೊದಲನೆ ವಾರದಲ್ಲಿ ಕೊರೋನ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ 28 ವರ್ಷದ ಮಹಿಳೆಗೆ ಕೊರೋನ ದೃಢಪಟ್ಟಿತ್ತು. ಆ ಮಹಿಳೆಯನ್ನು ಚಿಕಿತ್ಸೆಗೆಂದು ಆಂಬ್ಯುಲೆನ್ಸ್ ನಲ್ಲಿ ಸೆ.4ರಂದು ಸಂಜೆ 4.30ಕ್ಕೆ ಕರೆದೊಯ್ಯಲಾಗಿತ್ತು. ಆಂಬುಲೆನ್ಸ್ ನಲ್ಲಿ ಒಬ್ಬ ಗಂಟಲು ದ್ರವ ಸಂಗ್ರಹಿಸುವ ಸಿಬ್ಬಂದಿ, ಇಬ್ಬರು ಸಹಾಯಕ ಸಿಬ್ಬಂದಿ ಹಾಗೂ ಚಾಲಕ ಇದ್ದರು. ಅವರು ವೈಯಕ್ತಿಕ ಪಿಪಿಇ ಕಿಟ್ ಧರಿಸಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ.
ಬೊಮ್ಮನಹಳ್ಳಿ ವಲಯದ ಅರ್ಧ ಕಿ.ಮೀ. ದೂರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದರು. ಸಂಜೆ 5.15ಕ್ಕೆ ಆಸ್ಪತ್ರೆಗೆ ಹೋದರೆ ಅಲ್ಲಿ ದಾಖಲಿಸಿರಲಿಲ್ಲ. ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಕೂಡ ವಿಚಾರಿಸಲಾಯಿತು. ಎಲ್ಲಿಯೂ ದಾಖಲು ಮಾಡದಿರುವುದು ಖಚಿತವಾದಾಗ ಬೊಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವ್ಯಕ್ತಿಯ ಮನೆಗೆ ಆಂಬುಲೆನ್ಸ್ ಕಳಿಸುವ ಒಂದು ಗಂಟೆಯ ಮೊದಲು ಚಾಲಕನ ಹೆಸರು ಹಾಗೂ ಆಂಬುಲೆನ್ಸ್ ಸಂಖ್ಯೆಯನ್ನು ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ರೋಗಿಯು ಮೊಬೈಲ್ನೊಂದಿಗೆ ಆಸ್ಪತ್ರೆಗೆ ತೆರಳಲು ಅವಕಾಶವಿದೆ ಎಂದು ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ನನಗೆ ಯಾವುದೇ ರೀತಿಯ ಸಂದೇಶ ಮೊಬೈಲ್ಗೆ ಬಂದಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಆಗ್ನೇಯ ಡಿಸಿಪಿ ಶ್ರೀನಾಥ್ ಮಹದೇವ್ ಈ ಕುರಿತು ಪ್ರತಿಕ್ರಿಯಿಸಿ, ಮಹಿಳೆಯು ದೆಹಲಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಸ್ವಯಂಪ್ರೇರಣೆಯಿಂದ ಹೋಗಿದ್ದಾಗಿ ತಿಳಿಸಿದ್ದಾರೆ. ಹಿಂದಿರುಗುವ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಹೇಳಿದ್ದಾರೆ.







