ರೊಹಿಂಗ್ಯಾ ನರಮೇಧ: ಮಾನವಹಕ್ಕು ಪ್ರಶಸ್ತಿ ಸಮಾರಂಭಗಳಿಗೆ ಸೂ ಕಿಗೆ ನಿಷೇಧ ಹೇರಿದ ಐರೋಪ್ಯ ಸಂಸದರು

ಬ್ರಸೆಲ್ಸ್ (ಬೆಲ್ಜಿಯಮ್), ಸೆ. 10: ಯುರೋಪಿಯನ್ ಪಾರ್ಲಿಮೆಂಟ್‌ನ ಮಾನವಹಕ್ಕುಗಳ ಪ್ರಶಸ್ತಿ ವಿತರಣಾ ಸಮಾರಂಭಗಳಿಗೆ ಇನ್ನು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಯನ್ನು ಆಹ್ವಾನಿಸಲಾಗುವುದಿಲ್ಲ ಎಂದು ಐರೋಪ್ಯ ಒಕ್ಕೂಟದ ಸಂಸದರು ಗುರುವಾರ ಹೇಳಿದ್ದಾರೆ. ಈ ಪ್ರಶಸ್ತಿಯನ್ನು 1990ರಲ್ಲಿ ಸೂ ಕಿಗೆ ನೀಡಲಾಗಿತ್ತು.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿದೆಯೆನ್ನಲಾದ ಜನಾಂಗೀಯ ಹತ್ಯೆಯನ್ನು ಪ್ರತಿಭಟಿಸಿ ಐರೋಪ್ಯ ಸಂಸದರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ಪ್ರಶಸ್ತಿಯನ್ನು ಸ್ವೀಕರಿಸಿದ ಗೌರವಾರ್ಥ ಅವರನ್ನು ಈ ಪ್ರಶಸ್ತಿ ಪ್ರದಾನ ಸಮಾರಂಭಗಳು ಮತ್ತು ಐರೋಪ್ಯ ಒಕ್ಕೂಟ ಸಂಸದರು ಹಾಗೂ ಮಾನವಹಕ್ಕು ಸಂಘಟನೆಗಳ ಸಮಾವೇಶಗಳಿಗೆ ಆಹ್ವಾನಿಸಲಾಗುತ್ತಿತ್ತು.
ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆಯುತ್ತಿರುವ ಜನಾಂಗೀಯ ಹತ್ಯೆಯನ್ನು ತಡೆಯುವಲ್ಲಿನ ಸೂ ಕಿಯ ವೈಫಲ್ಯ ಹಾಗೂ ಅಪರಾಧಗಳನ್ನು ಅವರು ಸಹಜವೆಂಬಂತೆ ಸ್ವೀಕರಿಸಿರುವುದನ್ನು ವಿರೋಧಿಸಿ ‘ಸಖರೊವ್ ಪ್ರಶಸ್ತಿ’ ಪ್ರದಾನ ಸಮಾರಂಭಗಳಿಂದ ಅವರನ್ನು ಹೊರಗಿಡಲಾಗಿದೆ ಎಂದು ಹೇಳಿಕೆಯೊಂದರಲ್ಲಿ ಐರೋಪ್ಯ ಒಕ್ಕೂಟದ ಸಂಸದರು ಹೇಳಿದ್ದಾರೆ.





