ಪ್ರಧಾನಮಂತ್ರಿ ಮತ್ಸಸಂಪದ ಯೋಜನೆಗೆ ಪ್ರಧಾನಿ ಚಾಲನೆ

ಹೊಸದಿಲ್ಲಿ, ಸೆ.10: ಕೃಷಿಕರ ಆದಾಯ ದ್ವಿಗುಣಗೊಳಿಸುವ ಸರಕಾರದ ಉದ್ದೇಶಕ್ಕೆ ಪೂರಕವಾಗಿ ರೂಪಿಸಿರುವ 20,050 ಕೋಟಿ ರೂ. ಮೊತ್ತದ ಪ್ರಧಾನ ಮಂತ್ರಿ ಮತ್ಸಸಂಪದ ಯೋಜನೆ(ಪಿಎಂಎಂಎಸ್‌ವೈ)ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚಾಲನೆ ನೀಡಿದ್ದಾರೆ. ಇದೇ ಸಂದರ್ಭ ಬಿಹಾರದಲ್ಲಿ ಮೀನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರದಲ್ಲಿ ಇತರ ಹಲವು ಯೋಜನೆಗಳಿಗೂ ಚಾಲನೆ ನೀಡಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮ ನಡೆಯಿತು. ಜಾನುವಾರುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಇ-ಗೋಪಾಲ ಮೊಬೈಲ್ ಆ್ಯಪ್ ಅನ್ನೂ ಇದೇ ಸಂದರ್ಭ ಅನಾವರಣಗೊಳಿಸಲಾಗಿದೆ.
ಅಲ್ಲದೆ ಬಿಹಾರದ ಪೂರ್ನಿಯಾದಲ್ಲಿ 75 ಎಕರೆ ಜಮೀನಿನಲ್ಲಿ 84.27 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ವೀರ್ಯ ಕೇಂದ್ರದ ಉದ್ಘಾಟನೆಯೂ ನಡೆಯಿತು. ಬಳಿಕ ಹೈನುಗಾರಿಕೆ ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಜತೆ ಪ್ರಧಾನಿ ಸಂವಾದ ನಡೆಸಿದರು. ಆತ್ಮನಿರ್ಭರ ಭಾರತ್ ಪ್ಯಾಕೇಜ್‌ನ ಭಾಗವಾಗಿ 2020-21ರಿಂದ 2024-25ರ ಅವಧಿಯಲ್ಲಿ ಅನುಷ್ಟಾನಗೊಳ್ಳಲಿರುವ ಮತ್ಸಸಂಪದ ಯೋಜನೆ ಮೀನುಗಾರಿಕೆ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯ ಉದ್ದೇಶ ಹೊಂದಿದೆ.
ಇದರಲ್ಲಿ 12,340 ಕೋಟಿ ರೂ. ಮೊತ್ತವನ್ನು ಒಳನಾಡು ಮೀನುಗಾರಿಕೆ, ಮೀನುಗಾರಿಕೆ ಮತ್ತಿತರ ಕಡಲಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮೀಸಲಾಗಿದ್ದರೆ, 7,710 ಕೋಟಿ ರೂ. ಮೊತ್ತವನ್ನು ಮೀನುಗಾರಿಕೆ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗಿದೆ. 2024-25ರ ವೇಳೆಗೆ ಮೀನು ಉತ್ಪಾದನೆಯನ್ನು 70 ಲಕ್ಷದಷ್ಟು ಹೆಚ್ಚಿಸುವ ಜೊತೆಗೆ, ಮೀನುಗಾರಿಕೆ ಉತ್ಪನ್ನಗಳ ರಫ್ತನ್ನು 1 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮೂಲಗಳು ಹೇಳಿವೆ.







