ಉಡುಪಿ : ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಕಾರ್ಯ ಆರಂಭ
ಉಡುಪಿ, ಸೆ.10: ಉಡುಪಿ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವು ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಸಾರ್ವಜನಿ ಕರು ಆ್ಯಪ್ ಮೂಲಕ ಮರಳನ್ನು ನೇರವಾಗಿ ಖರೀದಿಸಬಹುದಾಗಿದೆ.
ಉಡುಪಿ, ಬ್ರಹ್ಮಾವರ ಮತ್ತು ಕಾಪು ತಾಲೂಕುಗಳ ವ್ಯಾಪ್ತಿಯ ಸ್ವರ್ಣ, ಸೀತಾನದಿ, ಪಾಪನಾಶಿನಿ ನದಿಯಲ್ಲಿ 13 ಮರಳ ದಿಬ್ಬಗಳನ್ನು ಗುರುತಿಸ ಲಾಗಿದ್ದು, ಇಲ್ಲಿ 713090 ಮೆಟ್ರಿಕ್ ಟನ್ ಮರಳು ಲಭ್ಯವಿದೆ.
ಮರಳು ದಿಬ್ಬ ತೆರವುಗೊಳಿಸುವ ಒಟ್ಟು 170 ಪರವಾನಿಗೆದಾರರ ಪೈಕಿ ಈ ವರ್ಷ 132 ಮಂದಿ ಪರವಾನಿಗೆದಾರರು ನೋಂದಾವಣೆ ಮಾಡಿ ಕೊಂಡಿದ್ದಾರೆ. ಇವರಲ್ಲಿ ಅಂದಾಜು 30-40 ಮಂದಿ ಮರಳು ತೆರವುಗೊಳಿಸುವ ಕಾರ್ಯ ದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಗೌತಮ್ ಶಾಸ್ತ್ರಿ ತಿಳಿಸಿದ್ದಾರೆ.
ಮರಳುಗಾರಿಕೆ ಮತ್ತೆ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಯಾವುದೇ ಮೋಸ ವಂಚನೆ ಇಲ್ಲದೆ ಮಧ್ಯವರ್ತಿಗಳ ಸಹಾಯ ಇಲ್ಲದೆ ನೇರವಾಗಿ ಗ್ರಾಹಕರು ಅತಿ ಸುಲಭವಾಗಿ ಮರಳನ್ನು ನೇರವಾಗಿ ಆ್ಯಪ್ ಮೂಲಕ ಪಡೆಯ ಬಹುದಾಗಿದೆ. ಮರಳು ಬೇಕಾದವರು ಉಡುಪಿ ಇ ಸ್ಯಾಂಡ್ ಪೋರ್ಟಲ್ ಮೂಲಕ ನೇರವಾಗಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ, ಸಾಗಾಟಕ್ಕೆ ದಂಡ ವಿಧಿಸುವ ಅಧಿಕಾರವನ್ನು ಸರಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನೀಡಿದೆ. 10 ಮೆಟ್ರಿಕ್ ಟನ್‌ಗೂ ಹೆಚ್ಚು ಸಾಮರ್ಥ್ಯವಿರುವ ವಾಹನಕ್ಕೆ 30 ಸಾವಿರ ರೂ., 10 ಮೆಟ್ರಿಕ್ ಟನ್ ಸಾಮರ್ಥ್ಯಗಿಂತ ಕಡಿಮೆ ಇರುವ ವಾಹನಕ್ಕೆ 20 ಸಾವಿರ ರೂ., ಅದಕ್ಕಿಂತ ಕಡಿಮೆ ಮೆಟ್ರಿಕ್ ಟನ್ ಸಾಮರ್ಥ್ಯವಿರುವ ವಾಹನಗಳಿಗೆ 10, 5 ಸಾವಿರ ರೂ., ದಂಡ ವಿಧಿಸುವ ಅಧಿಕಾರವನ್ನು ಇಲಾಖೆ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮರಳು ತೆರವುಗೊಳಿಸುವ ಕಾರ್ಯವನ್ನು ಕೆಲವು ಮಂದಿ ಆರಂಭಿಸಿದ್ದಾರೆ. ಬೇಕಾದವರು ಆನ್‌ಲೈನ್ ಮೂಲಕ ಬುಕ್ ಮಾಡಿ ಪಡೆಯ ಬಹುದಾಗಿದೆ. ಪರವಾನಿಗೆದಾರರು ದರ ಏರಿಕೆ ಮಾಡುವಂತೆ ಮನವಿ ಸಲ್ಲಿಸಿದ್ದು, ಈ ಬಗ್ಗೆ ಏಳು ಸದಸ್ಯರ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಈ ವರ್ಷ ಏಳು ಮೆಟ್ರಿಕ್ ಟನ್ ಲಭ್ಯ ಇರುವುದರಿಂದ ಈ ವರ್ಷ ಮರಳಿಗೆ ಯಾವುದೇ ಕೊರತೆ ಆಗುವುದಿಲ್ಲ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ







