ಸ್ವೀಡನ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಜಾಂಟಿ ರೋಡ್ಸ್

ಮುಂಬೈ, ಸೆ.10: ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸ್ವೀಡನ್ ರಾಷ್ಟ್ರೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದು, ಈ ಸಂಬಂಧ ಸ್ವೀಡನ್ ಕ್ರಿಕೆಟ್ ಒಕ್ಕೂಟದೊಂದಿಗೆ ಸಹಿ ಹಾಕಿದ್ದಾರೆ.
51ರ ಹರೆಯದ ರೋಡ್ಸ್ ಪ್ರಸ್ತುತ ದುಬೈನಲ್ಲಿ ಐಪಿಎಲ್ ಫ್ರಾಂಚೈಸಿ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೋಡ್ಸ್ ಐಪಿಎಲ್ ಮುಗಿದ ಬಳಿಕ ಸ್ವೀಡನ್‌ಗೆ ಪ್ರಯಾಣಿಸಲಿದ್ದಾರೆ. ತನ್ನ ಕುಟುಂಬದ ಸಮೇತ ಸ್ವೀಡನ್‌ಗೆ ತೆರಳಲು ನಿರ್ಧರಿಸಿರುವ ರೋಡ್ಸ್ ಸ್ವೀಡನ್ ಕ್ರಿಕೆಟ್ ತಂಡದ ಆಮೂಲಾಗ್ರ ಬೆಳವಣಿಗೆಗೆ ಕೆಲಸ ಮಾಡಲಿದ್ದಾರೆ. ‘‘ನನ್ನ ಕುಟುಂಬದೊಂದಿಗೆ ಸ್ವೀಡನ್‌ಗೆ ತೆರಳುವ ಅವಕಾಶ ಲಭಿಸಿರುವುದಕ್ಕೆ ನನಗೆ ನಿಜಕ್ಕೂ ತುಂಬಾ ಸಂತೋಷವಾಗುತ್ತಿದೆ. ಸ್ವೀಡನ್ ಕ್ರಿಕೆಟ್‌ನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ. ಸರಿಯಾದ ಸಮಯದಲ್ಲಿ ಈ ಅವಕಾಶ ಲಭಿಸಿದೆ. ಸಂಪೂರ್ಣ ಹೊಸ ವಾತಾವರಣದಲ್ಲಿ ನನ್ನ ಶಕ್ತಿಯನ್ನು ಕೊಡುಗೆಯಾಗಿ ನೀಡುವ ಅವಕಾಶ ಪಡೆದಿರುವುದಕ್ಕೆ ಆಭಾರಿಯಾಗಿರುವೆ. ಅಲ್ಲಿ ಕೆಲಸ ಆರಂಭಿಸಲು ಎದುರು ನೋಡುತ್ತಿರುವೆ’’ ಎಂದು ಸ್ವೀಡನ್ ಫೆಡರೇಶನ್ ವೆಬ್‌ಸೈಟ್‌ಗೆ ರೋಡ್ಸ್ ತಿಳಿಸಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಓರ್ವ ಶ್ರೇಷ್ಠ ಕ್ಷೇತ್ರರಕ್ಷಕನಾಗಿ ಗಮನ ಸೆಳೆದಿದ್ದ ರೋಡ್ಸ್ 1992ರಿಂದ 2003ರ ನಡುವೆ ದ.ಆಫ್ರಿಕಾದ ಪರವಾಗಿ 52 ಟೆಸ್ಟ್ ಹಾಗೂ 245 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.





