ಸುಶಾಂತ್ ಸಾವು ಪ್ರಕರಣ: ರಿಯಾಗೆ ಜಾಮೀನು ನಿರಾಕರಿಸಿದ ಮುಂಬೈ ನ್ಯಾಯಾಲಯ

ಮುಂಬೈ, ಸೆ.11:ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧವಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಮಾದಕವಸ್ತು ನಿಯಂತ್ರಣ ಬ್ಯುರೋ(ಎನ್‌ಸಿಬಿ)ದಿಂದ ಬಂಧಿಸಲ್ಪ್ಪಟ್ಟಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ,ಆಕೆಯ ಸಹೋದರ ಶೋವಿಕ್ ಹಾಗೂ ಇತರ 8 ಆರೋಪಿಗಳು ಜಾಮೀನಿಗಾಗಿ ಸಲ್ಲಿಸಿರುವ ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ಶುಕ್ರವಾರ ನಿರಾಕರಿಸಿದೆ.
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಿಯಾ ಅವರ ಮೊದಲ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ರಿಯಾ ಅವರನ್ನು ಸೆಪ್ಟಂಬರ್ 22ರ ತನಕ ಬೈಕುಲಾ ಜೈಲಿಗೆ ಕಳುಹಿಸಲಾಗಿತ್ತು. ಗುರುವಾರದಂದು ರಿಯಾ ಅವರ ಜಾಮೀನು ಮನವಿಯನ್ನು ಬಲವಾಗಿ ವಿರೋಧಿಸಿದ ಎನ್‌ಸಿಬಿ, ಸಹೋದರ ಶೋವಿಕ್ ಹಾಗೂ ನಟನ ಇಬ್ಬರು ಸಿಬ್ಬಂದಿಗಳ ಮುಖಾಂತರ ರಜಪೂತ್ ಗೆ ರಿಯಾ ಡ್ರಗ್ಸ್‌ನ್ನು ಪೂರೈಸುತ್ತಿದ್ದರು ಎಂದು ಉಲ್ಲೇಖಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಡ್ರಗ್ಸ್ ಸೇವಿಸುವ ಬಗ್ಗೆ ರಿಯಾಗೆ ಚೆನ್ನಾಗಿ ಗೊತ್ತಿತ್ತು. ಸುಶಾಂತ್‌ಗೆ ಡ್ರಗ್ಸ್ ಸಂಗ್ರಹಿಸಿಕೊಡುವ ಮೂಲಕ ರಿಯಾ ತನ್ನನ್ನು ತಾನು ಅಪರಾಧದ ಭಾಗವಾಗಿಸಿಕೊಂಡಿದ್ದಾಳೆ ಎಂದು ಎನ್‌ಸಿಬಿ ತಿಳಿಸಿದೆ.





