ಇತಿಹಾಸವು ನಿಮ್ಮ ಮೌನವನ್ನು ನಿರ್ಣಯಿಸುತ್ತದೆ: ಸೋನಿಯಾ ಗಾಂಧಿಯನ್ನು ಗುರಿಯಾಗಿಸಿದ ಕಂಗನಾ

ಹೊಸದಿಲ್ಲಿ, ಸೆ.11: ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ವಿರುದ್ಧದ ಹೋರಾಟದಲ್ಲಿ ನಟಿ ಕಂಗನಾ ರಣಾವತ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಗುರಿಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದ ಸಮ್ಮಿಶ್ರ ಸರಕಾರದ ಭಾಗವಾಗಿದೆ.
ಇತಿಹಾಸವು ನಿಮ್ಮ ಮೌನವನ್ನು ನಿರ್ಣಯಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷೆಗೆ ತಿಳಿಸಿರುವ ಕಂಗನಾ, ಬುಧವಾರ ತನ್ನ ಕಚೇರಿಯನ್ನು ಧ್ವಂಸ ಮಾಡಿರುವ ಮಹಾರಾಷ್ಟ್ರ ಸರಕಾರದ ವರ್ತನೆ ನನಗೆ ನೀಡುತ್ತಿರುವ ಕಿರುಕುಳ ಎಂದು ಹೇಳಿದ್ದಾರೆ.
"ಆತ್ಮೀಯ ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀಜಿ, ಮಹಾರಾಷ್ಟ್ರದಲ್ಲಿ ನಿಮ್ಮ ಸರಕಾರವು ನನಗೆ ನೀಡುತ್ತಿರುವ ಕಿರುಕುಳದಿಂದ ನೀವು ದುಃಖಿತರಾಗಿಲ್ಲವೇ?ಡಾ. ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿಹಿಡಿಯುವಂತೆ ನಿಮ್ಮ ಸರಕಾರವನ್ನು ಕೋರಲು ಸಾಧ್ಯವಿಲ್ಲವೇ?''ಎಂದು ಕಂಗನಾ ಟ್ವೀಟಿಸಿದ್ದಾರೆ.
"ನೀವು ಪಶ್ಚಿಮದಲ್ಲಿ ಬೆಳೆದು, ಭಾರತದಲ್ಲಿ ವಾಸಿಸುತ್ತಿದ್ದೀರಿ. ಮಹಿಳೆಯರ ಹೋರಾಟಗಳ ಕುರಿತು ನಿಮಗೆ ತಿಳಿದಿರಬಹುದು. ನಿಮ್ಮದೇ ಸರಕಾರವು ಮಹಿಳೆಯರಿಗೆ ಕಿರುಕುಳ ನೀಡುತ್ತಿರುವಾಗ ಹಾಗೂ ಕಾನೂನು, ಸುವ್ಯವಸ್ಥೆಯ ಸಂಪೂರ್ಣ ಅಪಹಾಸ್ಯವನ್ನು ಖಾತರಿಪಡಿಸುವಾಗ ಇತಿಹಾಸವು ನಿಮ್ಮ ವೌನ ಹಾಗೂ ಉದಾಸೀನತೆಯನ್ನು ನಿರ್ಣಯಿಸುತ್ತದೆ. ನೀವು ಮಧ್ಯಪ್ರವೇಶಿಸುತ್ತೀರಿ ಎಂಬ ವಿಶ್ವಾಸ ನನಗಿದೆ''ಎಂದು 33 ವರ್ಷದ ನಟಿ ಟ್ವೀಟ್ ಮಾಡಿದ್ದಾರೆ.





