ಶಿಕಾರಿಪುರ: ಹೊಲದಲ್ಲಿ ಗಾಂಜಾ ಬೆಳೆ; 27.5 ಕೆಜಿ ತೂಕದ ಹಸಿ ಗಿಡಗಳು ವಶಕ್ಕೆ

ಶಿವಮೊಗ್ಗ, ಸೆ.11: ಜಿಲ್ಲಾ ಡಿಸಿಐಬಿ ತಂಡ ಮತ್ತು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಪ್ಪತ್ತು ಸಾವಿರ ರೂ. ಮೌಲ್ಯದ 27 ಕೆಜಿ 500 ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಟ್ಟಿಗೆಹಳ್ಳ ಗ್ರಾಮದ ವಾಸಿಗಳಾದ ಸ್ವಾಮಿರಾವ್ ಮತ್ತು ನಾಗರಾಜ್ ಆರೋಪಿಗಳಾಗಿದ್ದಾರೆ. ಇವರು ತಮ್ಮ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಆರೋಪಿ ನಾಗರಾಜ್ ಜಮೀನಿನಲ್ಲಿ ಬೆಳೆದಿದ್ದ ಐವತ್ತು ಸಾವಿರ ರೂ. ಮೌಲ್ಯದ 20 ಕೆಜಿ ಹಸಿ ಗಾಂಜಾ ಗಿಡ ಮತ್ತು ಇನ್ನೋರ್ವ ಆರೋಪಿ ಸ್ವಾಮಿರಾವ್ ಜಮೀನಿನಲ್ಲಿ ಬೆಳೆದಿದ್ದ ಇಪ್ಪತ್ತು ಸಾವಿರ ರೂ. ಮೌಲ್ಯದ 7 ಕೆಜಿ 5೦೦ ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಶಿಕಾರಿಪುರ ವಿಭಾಗದ ಎಎಸ್‌ಸಿ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ,ಶಿಕಾರಿಪುರ ಗ್ರಾಮಾಂತರ ಠಾಣೆ ಪಿಎಸ್‌ಐ ರವಿಕುಮಾರ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.







