ಕೊರೋನ ಹೋದರೂ ಬಿಜೆಪಿ ರ್ಯಾಲಿ ನಡೆಸದಂತೆ ಲಾಕ್ ಡೌನ್ ಹೇರಲಾಗಿದೆ: ಬಂಗಾಳ ಬಿಜೆಪಿ ಅಧ್ಯಕ್ಷ ಆರೋಪ

ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿವೆಯೆನ್ನುವಾಗ ರಾಜ್ಯ ಬಿಜೆಪಿ ಕೊರೋನ ವೈರಸ್ ಅನ್ನೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧದ ತನ್ನ ಅಭಿಯಾನಕ್ಕೆ ಬಳಸಿಕೊಳ್ಳಲು ಮುಂದಾಗಿದೆ.
"ಕೊರೋನ ಚೋಲೆ ಗೆಚ್ಚೆ (ಕೊರೋನವೈರಸ್ ಹೋಗಿ ಬಿಟ್ಟಿದೆ). ರಾಜ್ಯದಲ್ಲಿ ಬಿಜೆಪಿ ಯಾವುದೇ ಸಭೆ ಅಥವಾ ರ್ಯಾಲಿಗಳನ್ನು ಆಯೋಜಿಸದಂತೆ ಮಾಡುವ ಉದ್ದೇಶದಿಂದ ದೀದಿಮೋನಿ (ಮಮತಾ ಬ್ಯಾನರ್ಜಿ) ಕೊರೋನ ವೈರಸ್ ಇದೆಯೆಂದು ಕೇವಲ ತೋರ್ಪಡಿಸುತ್ತಿದ್ದಾರೆ, ಆದರೆ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ,'' ಎಂದು ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಗುರುವಾರ ಧನಿಯಾಖಲಿ ಎಂಬಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.
ಕೋವಿಡ್ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬೇಡಿ, ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶವಾಸಿಗಳಿಗೆ ಮನವಿ ಮಾಡಿದ್ದರೂ ಇದು ಬಂಗಾಳ ಬಿಜೆಪಿ ಅಧ್ಯಕ್ಷರ ಗಮನಕ್ಕೆ ಹೋದಂತಿಲ್ಲ. ಪಕ್ಷದ ಉನ್ನತ ನಾಯಕರೆಲ್ಲಾ ಆನ್ಲೈನ್ ರ್ಯಾಲಿಗಳಿಗೆ ಮೊರೆ ಹೋಗಿದ್ದರೆ. ಇವರು ಮಾತ್ರ ಗುರುವಾರ ಬಹಳಷ್ಟು ಮಂದಿ ಸೇರಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.





