ಸೆ.15ರಿಂದ 23: ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕನ್ನಡ ಪ್ರಸಿದ್ಧ ಕಥೆಗಾರರ ಕಥಾ ವಾಚನ ಸಪ್ತಾಹ
ಉಡುಪಿ, ಸೆ.11: ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂವಿಪ್ರ ಸಂಭ್ರಮ-2020 ಇದೇ ಸೆ.15ರಿಂದ 23ರವರೆಗೆ ನಡೆಯಲಿದೆ. ಮೊದಲನೆಯ ದಿನ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಅಜೇರು ಹಾಡಿದ ’ಯಾರೆ ನೀನು ಮೋಹನಾಂಗಿ’ ಎಂಬ ವಿನೂತನ ಯಕ್ಷ ನಾಟ್ಯ ರವಿರಾಜ ಎಚ್.ಪಿ. ಇವರ ನಿರ್ದೇಶನದಲ್ಲಿ ಸಂಜೆ 6ಕ್ಕೆ ಪ್ರಸಾರಗೊಳ್ಳಲಿದೆ.
ಸೆ.16ರಿಂದ 22ರವರೆಗೆ ಕನ್ನಡದ ಪ್ರಸಿದ್ಧ ಕಥೆಗಾರರ ಕಥಾ ವಾಚನದ ಕಥಾ ಸಪ್ತಾಹ ನಡೆಯಲಿದ್ದು, ನಾಡಿನ ಶ್ರೇಷ್ಠ ಕಥೆಗಾರರ ಕಥೆಗಳನ್ನು ಅಹಲ್ಯ ಬಲ್ಲಾಳ್ ಮುಂಬೈ, ಜೀವನ್ ರಾಂ ಸುಳ್ಯ, ಡಾ ಕಾತ್ಯಾಯಿನಿ ಕುಂಜಿಬೆಟ್ಟು, ಶಶಿರಾಜ್ ಕಾವೂರು, ಗಣೇಶ್ ಮಂದರ್ತಿ , ಬಿಂದು ರಕ್ಷಿದಿ, ದಿಶಾ ರಮೇಶ್ ಮೈಸೂರು ಇವರು ವಾಚಿಸಲಿದ್ದಾರೆ.
ಇವರು ಪಂಜೆ ಮಂಗೇಶರಾಯರ ‘ಕಮಲಪುರದ ಹೋಟ್ಲಿನಲ್ಲಿ’, ಮಾಸ್ತಿ ವೆಂಕಟೇಶ್ ಅಯ್ಯಂಗಾರರ ‘ವೆಂಕಟಿಗನ ಹೆಂಡತಿ’, ಡಾ.ಯು.ಆರ್. ಅನಂತ ಮೂರ್ತಿ ಇವರ ‘ಮೌನಿ’, ಪಿ.ಲಂಕೇಶರ ‘ಉಮಾಪತಿ ಸ್ಕಾಲರ್‌ಶಿಪ್ ಯಾತ್ರೆ’, ಪೂರ್ಣಚಂದ್ರ ತೇಜಸ್ವಿ ಅವರ ‘ಮಾಯಾಮೃಗ’, ವೈದೇಹಿ ಅವರ ‘ಅವಲಂಬಿತರು’ ಹಾಗೂ ದೇವನೂರು ಮಹಾದೇವರ ‘ಮಾರಿಕೊಂಡವರು’ ಕಥೆಗಳನ್ನು ವಾಚಿಸಲಿದ್ದಾರೆ.
ಸೆ.23ರ ಬುಧವಾರ ಸಂಜೆ ಸಂಸ್ಥೆಯ ವೆಬ್‌ಸೈಟ್ ಉದ್ಘಾಟನೆಗೊಳ್ಳಲಿದ್ದು., ಉಡುಪಿ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಹರೀಶ್ಚಂದ್ರ ಇದನ್ನು ಉದ್ಘಾಟಿಸಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6ರಿಂದ ಸಂಸ್ಥೆಯ ಯೂಟ್ಯೂಬ್ ಹಾಗೂ ಫೇಸ್ಬುಕ್ ಚಾನೆಲ್‌ನಲ್ಲಿ ಪ್ರಸಾರಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆಯ ತಿಳಿಸಿದೆ.







