ಕೋವಿಡ್ 19 : ಮೃತದೇಹ ವಿಲೇವಾರಿ ಮಾರ್ಗಸೂಚಿಯಲ್ಲಿ ಬದಲಾವಣೆ
ಉಡುಪಿ, ಸೆ.11: ಕೋವಿಡ್ 19 ಮೃತದೇಹ ವಿಲೇವಾರಿ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಮೃತದೇಹ ಸಾಗಾಣಿಕೆಗೆ ಮೃತದೇಹ ವಿಲೇವಾರಿ ನೋಡಲ್ ಅಧಿಕಾರಿ (ಜಿಲ್ಲಾ ಸರ್ಜನ್) ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಮೃತದೇಹ ವನ್ನು ಮರಣ ಸಂಭವಿಸಿದ ಆಸ್ಪತ್ರೆಯ ಅಧಿಕಾರಿಗಳು ಮೃತದೇಹ ವಿಲೇವಾರಿ ನೋಡಲ್ ಅಧಿಕಾರಿ ಜೊತೆ ಸಂವಹನ ನಡೆಸಿ ಸರಿಯಾದ ದೇಹವನ್ನು ಹಸ್ತಾಂತರಿಸಲು ಕ್ರಮ ವಹಿಸಬೇಕು.
ಮೃತದೇಹವನ್ನು ನಿಗದಿತ ವಿಲೇವಾರಿ ಸ್ಥಳದಲ್ಲಿ ಸ್ವೀಕರಿಸಲು ಸಂಬಂಧಿಸಿದ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳು ಓರ್ವ ಜವಾಬ್ದಾರಿ ಯುತ ಸಿಬ್ಬಂದಿ ಯನ್ನು ನೇಮಕ ಮಾಡಬೇಕು. ಈ ಸಿಬ್ಬಂದಿ ಮೃತದೇಹ ವಿಲೇವಾರಿಯಲ್ಲಿ ಮಾರ್ಗಸೂಚಿಯ ಪಾಲನೆಯನ್ನು ಗಮನಿಸಬೇಕು ಮತ್ತು ವೈದ್ಯಾಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಬೇಕು. ಸೂಕ್ಷ್ಮ ಪ್ರಕರಣಗಳಲ್ಲಿ ವೈದ್ಯಾಧಿಕಾರಿಗಳು ಖುದ್ದಾಗಿ ಮೇಲ್ವಿಚಾರಣೆ ಮಾಡಬೇಕು.
ವಾರೀಸುದಾರರಿಲ್ಲ/ಹೊರಜಿಲ್ಲೆಯ ಮೃತದೇಹಗಳನ್ನು ಸ್ವೀಕರಿಸಲು ನಗರ/ ಪುರಸಭೆಯ ಆರೋಗ್ಯ ನಿರೀಕ್ಷಕರು ಪೌರಾಯುಕ್ತರು/ಮುಖ್ಯಾಧಿ ಕಾರಿಗಳ ಮೇಲ್ವಿಚಾರಣೆಯಲ್ಲಿ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಬೇಕು.
ಸ್ಮಶಾನದ ವ್ಯವಸ್ಥೆ, ಜವಾಬ್ದಾರಿಯುತ ಅಧಿಕಾರಿಗಳ ಕರ್ತವ್ಯಗಳು, ತಾಲೂಕು ದಂಡಾಧಿಕಾರಿಗಳ ಹಾಗೂ ತಹಶೀಲ್ದಾರ್‌ರ ಕರ್ತವ್ಯಗಳು ಹಾಗೂ ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





