ಸುಲಿಗೆ ಪ್ರಕರಣ: ಆರೋಪಿ ಇಬ್ಬರು ಸಹೋದರರಿಗೆ ಜೈಲು ಶಿಕ್ಷೆ
ಉಡುಪಿ, ಸೆ.11: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012ರಿಂದ 2014ರ ಮಧ್ಯಾವಧಿಯಲ್ಲಿ ನಡೆದ ನಾಲ್ಕು ಪ್ರತ್ಯೇಕ ಸುಲಿಗೆ ಪ್ರಕರಣಗಳ ಇಬ್ಬರು ಆರೋಪಿಗಳಿಗೆ ಉಡುಪಿಯ ಮೂರನೆ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಜೈಲುಶಿಕ್ಷೆ ವಿಧಿಸಿ ಸೆ.9ರಂದು ಆದೇಶ ನೀಡಿದೆ.
ಶಿರ್ವದ ಸಹೋದರರಾದ ರವಿರಾಜ್ ದೇವಾಡಿಗ ಮತ್ತು ಪ್ರಕಾಶ್ ದೇವಾಡಿಗ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳು. ಇವರಿಬ್ಬರು ಬೈಕಿನಲ್ಲಿ ಶಿರ್ವ ಗ್ರಾಮದ ಮೇಲ್ ಬೆಳಂಜಾಲು, ತೊಟ್ಲಗುರಿ, ಸೈಂಟ್ ಮೇರಿಸ್ ಚರ್ಚ್ ಆವರಣದಲ್ಲಿರುವ ಸ್ಮಶಾನಕ್ಕೆ ಹೋಗುವ ರಸ್ತೆ ಮತ್ತು ಕುತ್ಯಾರು ಎಂಬಲ್ಲಿ ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರು ಧರಿಸಿದ್ದ ಚಿನ್ನದ ಸರವನ್ನು ಬಲವಂತವಾಗಿ ಸುಲಿಗೆ ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖ ಲಾಗಿದ್ದವು. ಆಗಿನ ಕಾಪು ವೃತ್ತ ನಿರೀಕ್ಷಕ ಸುನಿಲ್ ವೈ.ನಾಯಕ್ ತನಿಖೆ ನಡೆಸಿ, ಆರೋಪಿಗಳ ಚಹರೆಯನ್ನು ದೂರುದಾರರ ಸಹಾಯದಿಂದ ಚಿತ್ರ ಬಿಡಿಸಿ, ಮೊಬೈಲ್ ಲೊಕೇಶನ್ ಮೂಲಕ ಧೃಡೀಕರಿಸಿದ್ದರು. 2014ರ ಎ.12ರಂದು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
4 ಪ್ರಕರಣಗಳ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸಿದ ನ್ಯಾಯಾಧೀಶ ಮಹಂತೇಶ್ ಬೂಸಗೋಳ, ಎಲ್ಲಾ ಪ್ರಕರಣಗಳಲ್ಲಿ ಸಾಕ್ಷಿದಾರರ ಸಾಕ್ಷ್ಯ ಹಾಗೂ ದಾಖಲೆಗಳ ಸಾಕ್ಷ್ಯವನ್ನು ಪರಿಶೀಲಿಸಿ ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿತರ ವಿರುದ್ಧ ಮೇಲಿನ 4 ಪ್ರಕರಣಗಳು ಸಾಬೀತಾ ಗಿದೆ ಎಂದು ತೀರ್ಮಾನಿಸಿದರು. ಆರೋಪಿಗಳಿಗೆ ಮೂರು ಪ್ರಕರಣಗಳಲ್ಲಿ ಕ್ರಮವಾಗಿ 1 ವರ್ಷ 6 ತಿಂಗಳುಗಳ ಶಿಕ್ಷೆ ಮತ್ತು 4ನೇ ಪ್ರಕರಣದಲ್ಲಿ 3 ವರ್ಷ 9 ತಿಂಗಳು ಶಿಕ್ಷೆ ಮತ್ತು 9500 ರೂ. ದಂಡ ವಿಧಿಸಿ ಆದೇಶ ನೀಡಿದರು.
ಎಲ್ಲಾ ಪ್ರಕರಣಗಳಲ್ಲಿ ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ.ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.







