ಜನರಿಗೆ 42,000 ಕೋ.ರೂ.ವಂಚಿಸಿದ್ದ ಇಬ್ಬರು ದಿಲ್ಲಿಯಲ್ಲಿ ಸೆರೆ

ಹೊಸದಿಲ್ಲಿ,ಸೆ.11: ಹೂಡಿಕೆಗೆ ಉತ್ತಮ ಪ್ರತಿಫಲವನ್ನು ನೀಡುವುದಾಗಿ ನಂಬಿಸಿ ‘ಬೈಕ್ ಬೋಟ್’ ಹೆಸರಿನ ಪೊಂಝಿ ಯೋಜನೆಯ ಮೂಲಕ ವಿವಿಧ ರಾಜ್ಯಗಳಲ್ಲಿ ಜನರಿಗೆ ಸುಮಾರು 42,000 ಕೋ.ರೂ.ಗಳನ್ನು ವಂಚಿಸಿದ್ದ ಆರೋಪಿಗಳಿಬ್ಬರನ್ನು ಬಂಧಿಸಿರುವುದಾಗಿ ದಿಲ್ಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಗಾರ್ವಿತ್ ಇನ್ನೋವೇಟಿವ್ ಪ್ರಮೋಟರ್ಸ್ ಲಿ.ನ ಸಿಎಂಡಿ ಸಂಜಯ ಭಾಟಿ ಮತ್ತು ನಿರ್ದೇಶಕ ರಾಜೇಶ ಭಾರದ್ವಾಜ ಬಂಧಿತ ಆರೋಪಿಗಳಾಗಿದ್ದಾರೆ. 62,000 ರೂ.ನೀಡಿ ದ್ವಿಚಕ್ರ ವಾಹನವನ್ನು ಖರೀದಿಸಿದರೆ ಬೈಕ್‌ನ ಮೌಲ್ಯ ಮತ್ತು ಬೈಕ್ ಮೇಲೆ ಬಾಡಿಗೆ ಸೇರಿದಂತೆ ಒಂದು ವರ್ಷದ ಅವಧಿಗೆ ಪ್ರತಿ ತಿಂಗಳು 9,500 ರೂ.ಮರುಪಾವತಿಸುವುದಾಗಿ ಆರೋಪಿಗಳು ಹೂಡಿಕೆದಾರರಿಗೆ ಆಮಿಷ ಒಡ್ಡಿದ್ದರು. ಜನವರಿ 2019ರಲ್ಲಿ ಇ-ಬೈಕ್ ಯೋಜನೆಯನ್ನೂ ಪ್ರಕಟಿಸಿದ್ದ ಕಂಪನಿಯು 1.24 ಲ.ರೂ.ಗಳನ್ನು ತೆತ್ತು ಬೈಕ್ ಖರೀದಿಸಿದರೆ ಒಂದು ವರ್ಷದವರೆಗೆ ಪ್ರತಿ ತಿಂಗಳು 17,000 ಪ್ರತಿಫಲವನ್ನು ನೀಡುವುದಾಗಿ ಘೋಷಿಸಿತ್ತು.
ಆರಂಭದಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ಹಣವನ್ನು ಪಾವತಿಸಿದ್ದ ಆರೋಪಿಗಳು ಬಳಿಕ ಅದಕ್ಕೆ ತಪ್ಪಿದ್ದಲ್ಲದೆ, ತಲೆಮರೆಸಿಕೊಂಡಿದ್ದರು.





