ಕೇಂದ್ರ ಸರಕಾರದಿಂದ ಕರ್ನಾಟಕ ಹೊರತುಪಡಿಸಿ 14 ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗಿ 6,195 ಕೋ. ರೂ. ಬಿಡುಗಡೆ

ಹೊಸದಿಲ್ಲಿ, ಸೆ. 11: ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕ ಹೊರತುಪಡಿಸಿ 14 ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗಿ 6.195 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಕೊರೋನ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆದಾಯ ಕೊರತೆ ಎದುರಿಸುತ್ತಿರುವ 14 ರಾಜ್ಯಗಳಿಗೆ ಹೆಚ್ಚುವರಿ ಸಂಪನ್ಮೂಲವಾಗಿ ಈ ಅನುದಾನ ಬಿಡಗುಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.
ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಝೊರಾಮ್, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಹಾಗೂ ಪಶ್ಚಿಮಬಂಗಾಳ-ಈ 14 ರಾಜ್ಯಗಳಿಗೆ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದ ಎಪ್ರಿಲ್-ಆಗಸ್ಟ್ ಅವಧಿಯಲ್ಲಿ ಕೂಡ ಅನುದಾನವಾಗಿ ಇಷ್ಟೇ ಮೊತ್ತವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿತ್ತು. ಮುಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ, 2020-21 ಹಾಗೂ 2021-22 ಆರ್ಥಿಕ ವರ್ಷವನ್ನು ವಿಭಿನ್ನವಾಗಿ ಪರಿಗಣಿಸುವಂತೆ 15ನೇ ಹಣಕಾಸು ಆಯೋಗದ ಆರ್ಥಿಕ ಸಲಹಾ ಮಂಡಳಿ ಸೆಪ್ಟಂಬರ್ 5ರಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿತ್ತು.





