ಆಂಧ್ರ: ಆಸ್ಪತ್ರೆಯಲ್ಲಿ ಬೆಡ್ ಕೊರತೆಯಿದೆ ಎಂದ ವೈದ್ಯರ ಬಂಧನಕ್ಕೆ ಡಿಸಿ ಆದೇಶ
ವೀಡಿಯೊ ವೈರಲ್

ಗುಂಟೂರು, ಸೆ.11: ಕೊರೋನ ಸೋಂಕಿನ ಪರಿಸ್ಥಿತಿಯ ಪರಾಮರ್ಶನಾ ಸಭೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯನ್ನು ವೈದ್ಯರು ಪ್ರಸ್ತಾವಿಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ಜಿಲ್ಲಾಧಿಕಾರಿ, ಆ ವೈದ್ಯರನ್ನು ಬಂಧಿಸುವಂತೆ ಆದೇಶಿಸಿದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದ್ದು ಘಟನೆಯ ವೀಡಿಯೊ ದೃಶ್ಯಾವಳಿ ವೈರಲ್ ಆಗಿದೆ.
ಗುರುವಾರ ಗುಂಟೂರಿನ ನರಸರಾವ್‌ಪೇಟೆ ಪುರಭವನದಲ್ಲಿ ಪರಿಶೀಲನಾ ಸಭೆ ನಡೆದಿದ್ದು ಗುಂಟೂರು ಜಿಲ್ಲಾಧಿಕಾರಿ ಸಾಮ್ಯುವೆಲ್ ಆನಂದ್ ಕುಮಾರ್ ಮತ್ತು ನಾದೇಂಡ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೋಮ್ಲಾ ನಾಯ್ಕ್ ಮಧ್ಯೆ ವಾದ ವಿವಾದ ಆರಂಭವಾಗಿದೆ. ಆರೋಗ್ಯ ಕೇಂದ್ರದಲ್ಲಿ ಬೆಡ್‌ಗಳ ಕೊರತೆಯನ್ನು ಡಾ ನಾಕ್ ಪ್ರಸ್ತಾವಿಸಿದರು. ಇದರಿಂದ ತಾಳ್ಮೆ ಕಳೆದುಕೊಂಡ ಜಿಲ್ಲಾಧಿಕಾರಿ, ಎಂತಹ ಅಸಂಬದ್ಧತೆ. ಈ ಡಾಕ್ಟರ್ ಎಲ್ಲಿಂದ ಬಂದವರು ? ಆತನನ್ನು ಇಲ್ಲಿಂದ ಕರೆದೊಯ್ದು ಬಂಧಿಸಿ. ನನ್ನನ್ನು ಪ್ರಶ್ನಿಸಲು ಅವನಿಗೆಷ್ಟು ಧೈರ್ಯ ಬೇಕು. ವಿಪತ್ತು ನಿರ್ವಹಣೆ ಸೆಕ್ಷನ್‌ನಡಿ ಈತನನ್ನು ಬಂಧಿಸಿ ಕರೆದೊಯ್ಯಿರಿ ಎಂದು ರೇಗಾಡಿದ್ದಾರೆ. ಇದರಿಂದ ಮುಜುಗುರಕ್ಕೆ ಒಳಗಾದ ವೈದ್ಯರು ತನ್ನ ಫೈಲ್‌ಗಳನ್ನು ಹಿಡಿದುಕೊಂಡು ಸಭೆಯಿಂದ ಹೊರನಡೆಯುವ ವೀಡಿಯೊ ದೃಶ್ಯ ವೈರಲ್ ಆಗಿದೆ.
ಇಷ್ಟಕ್ಕೇ ಸುಮ್ಮನಾಗದ ಜಿಲ್ಲಾಧಿಕಾರಿ, ಡಾ. ಸೋಮ್ಲಾ ನಾಯ್ಕ್ ರನ್ನು ಅಮಾನತುಗೊಳಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಡಾ ಜೆ ಯಾಸ್ಮಿನ್‌ರಿಗೆ ಆದೇಶಿಸಿದ್ದಾರೆ. ಅಲ್ಲದೆ, ಅವರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿ ವೀರಾ ರೆಡ್ಡಿಗೆ ಸೂಚಿಸಿದ್ದಾರೆ. ಬಳಿಕ ಅವರನ್ನು ನರಸರಾವ್‌ಪೇಟೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಕರೆತಂದು ಅಲ್ಲಿಂದ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತೆಲುದುಗೇಶಂ ಪಕ್ಷದ ಮುಖಂಡ ನಾರಾ ಲೋಕೇಶ್, ಓರ್ವ ಬುಡಕಟ್ಟು ಸಮುದಾಯದ ಅಧಿಕಾರಿಯ ಮೇಲೆ ಜಗನ್‌ಮೋಹನ್ ರೆಡ್ಡಿ ಸರಕಾರ ನಡೆಸಿರುವ ದೌರ್ಜನ್ಯ ಇದಾಗಿದೆ. ಡಾ. ಸೋಮ್ಲಾ ನಾಯ್ಕ್‌ರ ಬಂಧನ ಖಂಡನಾರ್ಹ ಎಂದಿದ್ದಾರೆ. ಘಟನೆಯನ್ನು ಖಂಡಿಸಿರುವ ಆಂಧ್ರಪ್ರದೇಶ ಸರಕಾರಿ ವೈದ್ಯರ ಸಂಘ, ಬಂಧನ ಆಜ್ಞೆಯನ್ನು ವಾಪಾಸು ಪಡೆಯದಿದ್ದರೆ ಮುಷ್ಕರ ನಡೆಸುವುದಾಗಿ ಎಚ್ಚರಿಸಿದೆ. ಅಲ್ಲದೆ ಡಾ. ಸೋಮ್ಲಾ ನಾಯ್ಕ್ ಪ್ರಸ್ತಾವಿಸಿರುವ ವಿಷಯದ ಬಗ್ಗೆ ಇಲಾಖಾ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.







