ಅವೆುರಿಕ ಚುನಾವಣೆಯ ಮೇಲೆ ರಶ್ಯ, ಚೀನಾ, ಇರಾನ್ ಹ್ಯಾಕರ್‌ಗಳಿಂದ ದಾಳಿ: ಮೈಕ್ರೋಸಾಫ್ಟ್ ಎಚ್ಚರಿಕೆ

ವಾಶಿಂಗ್ಟನ್, ಸೆ. 11: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳನ್ನು ಗುರಿಯಾಗಿಸಿ ಚೀನಾ, ರಶ್ಯ ಮತ್ತು ಇರಾನ್ ಇತ್ತೀಚೆಗೆ ನಡೆಸಿರುವ ಸೈಬರ್ ದಾಳಿಗಳನ್ನು ತಾನು ವಿಫಲಗೊಳಿಸಿರುವುದಾಗಿ ವೈಕ್ರೋಸಾಫ್ಟ್ ಕಂಪೆನಿ ಗುರುವಾರ ಹೇಳಿದೆ. ಆಡಳಿತಾರೂಢ ರಿಪಬ್ಲಿಕನ್ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ಎರಡೂ ಪಕ್ಷಗಳನ್ನು ಗುರಿಯಾಗಿಸಿ ಸೈಬರ್ ದಾಳಿಗಳನ್ನು ನಡೆಸಲಾಗಿದೆ ಎಂದು ತಂತ್ರಜ್ಞಾನ ಕಂಪೆನಿ ತಿಳಿಸಿದೆ.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್‌ರ ಪ್ರಚಾರ ತಂಡಗಳ ಸಿಬ್ಬಂದಿಯನ್ನು ಗುರಿಯಾಗಿಸಿ ಕನ್ನಗಾರರು ದಾಳಿ ನಡೆಸುತ್ತಿದ್ದಾರೆ ಎಂದು ಮೈಕ್ರೋಸಾಫ್ಟ್ ಭದ್ರತಾ ಬ್ಲಾಗ್ ಒಂದರಲ್ಲಿ ಹೇಳಿದೆ.
‘‘ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಒಳಗೊಂಡಿರುವ ಜನರು ಮತ್ತು ಸಂಘಟನೆಗಳನ್ನು ಗುರಿಯಾಗಿಸಿ ನಡೆಸಲಾಗಿರುವ ಸೈಬರ್ ದಾಳಿಗಳನ್ನು ಇತ್ತೀಚಿನ ವಾರಗಳಲ್ಲಿ ಮೈಕ್ರೋಸಾಫ್ಟ್ ಪತ್ತೆಹಚ್ಚಿದೆ. ಟ್ರಂಪ್ ಮತ್ತು ಬೈಡನ್ ಪ್ರಚಾರ ತಂಡಗಳೊಂದಿಗೆ ಗುರುತಿಸಿಕೊಂಡಿರುವ ಜನರ ಮೇಲೆ ವಿಫಲ ಸೈಬರ್ ದಾಳಿಗಳನ್ನು ನಡೆಸಲಾಗಿದೆ’’ ಎಂದು ಮೈಕ್ರೋಸಾಫ್ಟ್‌ನ ಕಾರ್ಪೊರೇಟ್ ಉಪಾಧ್ಯಕ್ಷ ಟಾಮ್ ಬರ್ಟ್ ಹೇಳಿದ್ದಾರೆ.





