ಸೆ. 21ರಿಂದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಡಿಲಿಕೆ
ಕಾಸರಗೋಡು - ಮಂಗಳೂರು ನಡುವೆ ಬಸ್ ಸಂಚಾರಕ್ಕೂ ಹಸಿರು ನಿಶಾನೆ
ಕಾಸರಗೋಡು, ಸೆ.11 : ಕೋವಿಡ್ ಪ್ರತಿರೋಧ ಕಟ್ಟಿನಿಟ್ಟುಗಳಲ್ಲಿ ಸೆ. 21ರಿಂದ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚುವರಿ ಸಡಿಲಿಕೆ ಮಂಜೂರಾತಿ ನೀಡಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಶುಕ್ರವಾರ ನಡೆದ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ವಿವಾಹ, ಮರಣ ಸಂಬಂಧ ಸಹಿತ ಸಾರ್ವಜನಿಕ-ಖಾಸಗಿ ಸಮಾರಂಭಗಳಲ್ಲಿ ಗರಿಷ್ಠ 100 ಮಂದಿ ಭಾಗವಹಿಸಬಹುದು. ಆದರೆ ರಾಜಕೀಯ ಪಕ್ಷಗಳ ಸಮಾರಂಭಗಳು, ಸಾರ್ವಜನಿಕ ಸಭೆಗಳು ನಡೆಸಬೇಕಿದ್ದರೆ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿ ನಿರ್ಧಾರ ಕೈಗೊಳ್ಳಬೇಕಿದೆ ಎಂದವರು ನುಡಿದರು.
ಬೇಕಲ ಕೋಟೆ ಸೆ.21ರಿಂದ ಪ್ರವಾಸಿಗರಿಗಾಗಿ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಏಕಕಾಲಕ್ಕೆ 100 ಮಂದಿಗೆ ಮಾತ್ರ ಪ್ರವೇಶ, ಪಳ್ಳಿಕ್ಕರೆ ಬೀಚ್ ಮತ್ತು ರಾಣಿಪುರಂ ಕೂಡ 21ರಂದು ಪ್ರವಾಸಿ ಗರಿಗಾಗಿ ಈ ಕಡ್ಡಾಯಗಳ ಸಹಿತ ತೆರೆಯಲಾಗುವುದು. ಬಿ.ಆರ್.ಡಿ.ಸಿ.ಯ ರೆಸಾರ್ಟ್ ಗಳು , ಹೋ ಸ್ಟೇಗಳು 21ರಿಂದ ತೆರೆದು ಕಾರ್ಯಾಚಲು ಅನುಮತಿ ನೀಡಲಾಗುವುದು. ಇಲ್ಲಿಗೆ ವಸತಿಗಾಗಿ ಆಗಮಿಸುವ ಪ್ರವಾಸಿಗರು ಆಂಟಿಜೆನ್ ಟೆಸ್ಟ್ ಗೆ ಕಡ್ಡಾಯವಾಗಿ ಒಳಗಾಗಬೇಕು. ಜೊತೆಗೆ ಥರ್ಮಲ್ ತಪಾಸಣೆಯೂ ಇರುವುದು. ಇದೇ ಕಟ್ಟುನಿಟ್ಟುಗಳೊಂದಿಗೆ ಹೌಸ್ ಬೋಟ್ ಗಳ ಸರ್ವೀಸ್ ನಡೆಸಬಹುದು.
ನೌಕರಿ ತರಬೇತಿ ಆರಂಭಿಸಬಹುದು
ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ಆರ್ ಸೆಟ್ಟಿ ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ನೌಕರಿ ತರಬೇತಿ ತರಗತಿಗಳು ಪುನರಾ ರಂಭಿಸಲು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ಮಂಜೂರಾತಿ ನೀಡಿದೆ. ಶೇ 50 ಸಿಟುಗಳಲ್ಲಿ ತರಬೇತಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.
1562 ಮಂದಿ ಕೋವಿಡ್ ರೋಗಿಗಳಿಗೆ ಸ್ವಗೃಹಗಳಲ್ಲಿ ಚಿಕಿತ್ಸೆ
ಯಾವುದೇ ರೋಗ ಲಕ್ಷಣಗಳಿಲ್ಲದೆ ಕೋವಿಡ್ ಸೋಂಕು ಖಚಿತವಾದ ಮಂದಿಗೆ ಸ್ವ ಗೃಹಗಳಲ್ಲೇ ಚಿಕಿತ್ಸೆ ನೀಡುವ ವಿನೂತನ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಕೊರೋನಾ ಕೋರ್ ಸಮಿತಿ ಸಭೆ ಅವಲೋಖನ ನಡೆಸಿದೆ. ಈ ವರೆಗೆ 1562 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 702 ಮಂದಿ ಈಗಲೂ ದಾಖಲಾತಿ ಚಿಕಿತ್ಸೆಯಲ್ಲಿ ಮುಂದುವರಿಯುತ್ತಿದ್ದಾರೆ.
ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳೂ ತಮ್ಮ ವ್ಯಾಪ್ತಿಯ ಕೋವಿಡ್ ರೋಗಿಗಳಿಗೆ ಅಗತ್ಯದ ಓಕ್ಸಿ ಮೀಟರ್ ಒದಗಿಸಬೇಕು ಎಂದು ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಅವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ಅಜಾನೂರು-ಕೋಟಿಕುಳಂ ವಲಯಗಳ ಮನೆಗಳಲ್ಲಿ ಸ್ವಗೃಹಗಳಲ್ಲಿ ಚಿಕಿತ್ಸೆಗೆ ಸೌಲಭ್ಯಗಳಿಲ್ಲದೇ ಇರುವ ಕಾರಣ ಸಿ.ಎಫ್.ಎಲ್.ಟಿ.ಸಿ. ಗಾಗಿ ಪತ್ತೆ ಮಾಡಿರುವ ನೂತನ ಕಟ್ಟಡವನ್ನು ಈ ನಿಟ್ಟಿನಲ್ಲಿ ಬಳಸಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
21 ರಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆನ್ ಡಿಮಾಂಡ್
ಸೆ.21ರಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಆನ್ ಡಿಮಾಂಡ್ ಸೇವೆ ನಡೆಸಲಿವೆ. ಕಾಸರಗೋಡು-ಮಂಗಳೂರು, ಕಾಸರಗೋಡು-ಪಂಜಿಕ್ಕಲ್ಲು ರಸ್ತೆಯಲ್ಲಿ ಈ ಸೇವೆ ಲಭ್ಯವಿರುವುದು. ಈ ಪ್ರಕಾರದ ಸೇವೆ ಲಭ್ಯತೆಗೆ ಕೆ.ಎಸ್.ಆರ್.ಟಿ.ಸಿ. ಆನ್ ಲೈನ್ ಬುಕ್ಕಿಂಗ್ ಸೌಲಭ್ಯ ಬಳಸಿ ಬುಕ್ಕಿಂಗ್ ನಡೆಸಬೇಕು. ಒಂದು ರೂಟ್ ನಲ್ಲಿ ಒಂದೇ ಬಸ್ ನಲ್ಲಿ 40 ಮಂದಿ ಬುಕ್ಕಿಂಗ್ ನಡೆಸಿದರೆ ಸಂಚಾರ ಆರಂಭಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಮಾಸ್ಟರ್ ಯೋಜನೆ: ತಡೆಮಾಡಿದರೆ ಶಿಕ್ಷೆ
ಮಾಸ್ಟರ್ ಯೋಜನೆ ಪ್ರಕಾರ ಹೊಣೆಯಲ್ಲಿರುವ ಶಿಕ್ಷಕರ ಔದ್ಯೋಗಿಕ ಕರ್ತವ್ಯಕ್ಕೆ ತಡೆಯುಂಟು ಮಾಡಿದರೆ ಆರೋಪಿಯ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಲಾಗುವುದು. ಭಾರತೀಯ ದಂಡ ಸಂಹಿತೆ 353 ಪ್ರಕಾರ ಈ ಕೇಸು ದಾಖಲಾಗಿದೆ. ಇದೇ ವೇಳೆ ಕೇರಳ ಅಂಟುರೋಗ ನಿಯಂತ್ರಣ ಕಾಯಿದೆಗಳ ಪ್ರಕಾರ ಈ ಮೂಲಕ 5 ವರ್ಷದ ಕಠಿಣ ಸಜೆಯೂ ದೊರೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ನಿಯಂತ್ರಣ ಚಟುವಟಿಕೆಯಲ್ಲಿ ಮಾಸ್ಟರ್ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ ಎಂದು ಸಭೆ ಅವಲೋಕನ ನಡೆಸಿದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಬ್ರೇಕ್ ದ ಚೈನ್ ಖಚಿತಪಡಿಸುವುದು ಶಿಕ್ಷಕರ ಗುರಿಯಾಗಿರುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆರ ವಹಿಸಿದ್ದರು. ಉಪ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ವಲಯ ಕಂದಾಯಾಧಿಕಾರಿ ಷಂಸುದ್ದೀನ್, ಡಿ.ವೈ.ಎಸ್.ಪಿಗಳಾದ ಬಾಲಕೃಷ್ಣನ್ ನಾಯರ್, ವಿನೋದ್ ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾದವರು ಉಪಸ್ಥಿತರಿದ್ದರು.







