ಗಡಿ ಉದ್ವಿಗ್ನತೆ ನಡುವೆ 5 ಅಂಶಗಳ ಯೋಜನೆಗೆ ಭಾರತ-ಚೀನಾ ಒಪ್ಪಿಗೆ

ಹೊಸದಿಲ್ಲಿ, ಸೆ. 11: ಭಾರತ-ಚೀನಾ ಗಡಿ ಪ್ರದೇಶಗಳಲ್ಲಿನ ಬೆಳವಣಿಗೆಗಳು ಹಾಗೂ ಭಾರತ-ಚೀನಾ ಸಂಬಂಧಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್ ಯಿ ಮಾಸ್ಕೊದಲ್ಲಿ ಗುರುವಾರ ಸಂಜೆ ಸ್ಪಷ್ಟ ಹಾಗೂ ರಚನಾತ್ಮಕ ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಜಂಟಿ ಹೇಳಿಕೆ ತಿಳಿಸಿದೆ. ಶಾಂಘಾ ಕೊ-ಆಪರೇಶನ್ ಆರ್ಗನೈಸೇಶನ್ (ಎಸ್‌ಸಿಒ) ಸಭೆಯ ನೇಪಥ್ಯದಲ್ಲಿ ಇಬ್ಬರು ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಚೀನಾದ ರಕ್ಷಣಾ ಸಚಿವ ವೈ ಫೆಂಗಿ ಮಾಸ್ಕೊದಲ್ಲಿ ಬೇಟಿಯಾಗಿ ಮಾತುಕತೆ ನಡೆಸಿದ ಸುಮಾರು ಒಂದು ವಾರಗಳ ಬಳಿಕ ಈ ಮಾತುಕತೆ ನಡೆದಿದೆ. ಭಿನ್ನಾಭಿಪ್ರಾಯಗಳು ವಿವಾದವಾಗಲು ಅವಕಾಶ ನೀಡದಿರುವುದು ಸೇರಿದಂತೆ ಭಾರತ-ಚೀನಾ ಸಂಬಂಧ ಅಭಿವೃದ್ಧಿಗೆ ನಾಯಕರ ಸರಣಿ ಒಮ್ಮತದಿಂದ ಉಭಯ ದೇಶಗಳು ಮಾರ್ಗದರ್ಶನ ಪಡೆಯಲು ಇಬ್ಬರು ಸಚಿವರು ಒಪ್ಪಿಕೊಂಡರು.
ಗಡಿ ಪ್ರದೇಶದ ಪ್ರಸ್ತುತದ ಪರಿಸ್ಥಿತಿಗೆ ಉಭಯ ಕಡೆಯ ಹಿತಾಸಕ್ತಿ ಕಾರಣ ಅಲ್ಲ ಎಂಬುದನ್ನು ಇಬ್ಬರೂ ವಿದೇಶಾಂಗ ವ್ಯವಹಾರಗಳ ಸಚಿವರು ಒಪ್ಪಿಕೊಂಡರು. ಉಭಯ ಕಡೆಯ ಗಡಿ ಭದ್ರತಾ ಪಡೆಗಳು ತಮ್ಮ ಮಾತುಕತೆ ಮುಂದುವರಿಸಬೇಕು, ಸೇನೆ ಕೂಡಲೇ ಹಿಂದೆ ಸರಿಯಬೇಕು, ಉದ್ವಿಗ್ನತೆ ನಿವಾರಿಸಲು ಸೂಕ್ತ ಅಂತರ ಕಾಯ್ದುಕೊಳ್ಳಬೇಕು ಎಂಬುದಕ್ಕೆ ಅವರು ಒಪ್ಪಿಗೆ ಸೂಚಿಸಿದರು. ಚೀನಾ-ಭಾರತ ಗಡಿ ವ್ಯವಹಾರಗಳ ಅಸ್ತಿತ್ವದಲ್ಲಿರುವ ಎಲ್ಲ ಒಪ್ಪಂದ ಹಾಗೂ ನಿಯಮಾವಳಿಗಳನ್ನು ಎರಡೂ ಕಡೆಯವರು ಪಾಲಿಸಬೇಕು, ಗಡಿ ಪ್ರದೇಶದಲ್ಲಿ ಶಾಂತಿ ಹಾಗೂ ನೆಮ್ಮದಿ ಕಾಪಾಡಬೇಕು, ಬಿಕ್ಕಟ್ಟನ್ನು ಉಲ್ಭಣಗೊಳಿಸುವ ಯಾವುದೇ ಕ್ರಮವನ್ನು ತಪ್ಪಿಸಬೇಕು ಎಂಬುದಕ್ಕೆ ಉಭಯ ದೇಶಗಳ ಸಚಿವರು ಒಪ್ಪಿಕೊಂಡರು. ಭಾರತ-ಚೀನಾ ಗಡಿ ವಿವಾದದ ಕುರಿತು ವಿಶೇಷ ಪ್ರತಿನಿಧಿ ವ್ಯವಸ್ಥೆಯ ಮೂಲಕ ಮಾತುಕತೆ ಹಾಗೂ ಸಂವಹನವನ್ನು ಮುಂದುವರಿಸುವುದಕ್ಕೆ ಉಭಯ ಕಡೆಯ ಸಚಿವರು ಒಪ್ಪಿಕೊಂಡರು. ‘ಇಂಡಿಯಾ-ಚೀನಾ ಗಡಿ ವ್ಯವಹಾರಗಳ ಸಂಯೋಜನೆ ಹಾಗೂ ಸಮಾಲೋಚನೆಯ ಕಾರ್ಯಾನಿರ್ವಹಣಾ ವ್ಯವಸ್ಥೆ’ (ವರ್ಕಿಂಗ್ ಮೆಕಾನಿಸಂ ಫಾರ್ ಕನ್ಸಲ್ಟೇಶನ್ ಆ್ಯಂಡ್ ಕೋ-ಆರ್ಡಿನೇಶನ್ ಆನ್ ಇಂಡಿಯಾ-ಚೀನಾ ಬಾರ್ಡರ್ ಅಫೆಯರ್ಸ್ -ಡಬ್ಲ್ಯುಎಂಸಿಸಿ) ತನ್ನ ಮಾತುಕತೆಯನ್ನು ಮುಂದುವರಿಸುವುದಕ್ಕೆ ಕೂಡ ಅವರು ಈ ಸಂದರ್ಭ ಒಪ್ಪಿಗೆ ಸೂಚಿಸಿದರು. ಪರಿಸ್ಥಿತಿ ಸರಾಗವಾಗುತ್ತಿದ್ದಂತೆ ಉಭಯ ಕಡೆಯವರು ಗಡಿ ಪ್ರದೇಶಗಳಲ್ಲಿ ಶಾಂತಿ ಹಾಗೂ ನೆಮ್ಮದಿ ನಿರ್ವಹಿಸಲು ಹಾಗೂ ಹೆಚ್ಚಿಸಲು ನೂತನ ವಿಶ್ವಾಸಾರ್ಹತೆ ನಿರ್ಮಾಣ ಕ್ರಮಗಳನ್ನು ಪೂರ್ಣಗೊಳಿಸಲು ಎರಡೂ ಕಡೆಯವರು ತೀರ್ಮಾನಕ್ಕೆ ಬರಬೇಕು ಎಂಬುದನ್ನು ಉಭಯ ದೇಶಗಳ ಸಚಿವರು ಒಪ್ಪಿಕೊಂಡರು.







