ವಿಮಾನದಲ್ಲಿ ಕಂಗನಾ ರಾಣಾವತ್ ಅವರನ್ನು ಸುತ್ತುವರಿದ ಪ್ರಯಾಣಿಕರು
ಡಿಜಿಸಿಎಯಿಂದ ಇಂಡಿಗೊ ವಿಮಾನ ಯಾನ ಸಂಸ್ಥೆಗೆ ನೋಟಿಸ್
ಹೊಸದಿಲ್ಲಿ, ಸೆ. 11: ಸೆಪ್ಟಂಬರ್ 9ರಂದು ಚಂಡಿಗಢ-ಮುಂಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಟಿ ಕಂಗನಾ ರಾಣಾವತ್ ಅವರನ್ನು ಅಭಿಮಾನಿಗಳು ಸುತ್ತುವರಿದ ಸಂದರ್ಭ ಸುರಕ್ಷೆ ಹಾಗೂ ಕೊರೋನಾ ನಿಯಮಾವಳಿಗಳಾದ ಮಾಸ್ಕ್ ಧಾರಣೆ, ಸುರಕ್ಷಾ ಅಂತರ ಅನುಸರಿಸದ ಆರೋಪದ ಕುರಿತು ನಾಗರಿಕ ವಾಯು ಯಾನದ ಮಹಾ ನಿರ್ದೇಶಕರು ವಿಮಾನ ಯಾನ ಸಂಸ್ಥೆ ಇಂಡಿಗೊದಿಂದ ವರದಿ ಕೋರಿದ್ದಾರೆ.
ವಿಮಾನ ಮುಂಬೈಯಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರು, ವರದಿಗಾರರು ಹಾಗೂ ಕೆಮರಾಮೆನ್‌ಗಳು ತಮ್ಮ ಆಸನದಿಂದ ಎದ್ದು ಮುಂದಿನ ಆಸನದಲ್ಲಿ ಕುಳಿತುಕೊಂಡಿದ್ದ ಕಂಗನಾ ರಾಣಾವತ್ ಅವರಿದ್ದೆಡೆಗೆ ಧಾವಿಸಿರುವುದು ಹಾಗೂ ಅವರನ್ನು ಸುತ್ತವರಿದಿರುವುದು ವಿಮಾನದಲ್ಲಿದ್ದ ವೀಡಿಯೊದಲ್ಲಿ ದಾಖಲಾಗಿದೆ.
ಮುಂಬೈಯಲ್ಲಿ ವಿಮಾನ ಇಳಿದ ಬಳಿಕ ನಡೆದ ಈ ಘಟನೆ ಸಂದರ್ಭ ವಿಮಾನದ ಸಿಬ್ಬಂದಿ, ವಿಮಾನ ಪ್ರಯಾಣದ ಸಂದರ್ಭದ ನಿಯಮಗಳನ್ನು ಅನುಸರಿಸುವಂತೆ ಪ್ರಯಾಣಿಕರನ್ನು ಉದ್ದೇಶಿಸಿ ಮತ್ತೆ ಮತ್ತೆ ಘೋಷಿಸಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಒಂದು ಘೋಷಣೆಯಲ್ಲಿ ವಿಮಾನದ ಸಿಬ್ಬಂದಿ, ‘‘ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಾವೆಲ್ಲರೂ ಸಮಾನರು. ದಯವಿಟ್ಟು ಯಾವುದೇ ಪ್ರಯಾಣಿಕರಿಗೆ ತೊಂದರೆ ನೀಡಬೇಡಿ. ಎಲ್ಲ ಸುರಕ್ಷಾ ನಿಯಮಗಳನ್ನು ಪಾಲಿಸಿ. ಆಸನದ ಬೆಲ್ಟ್ ಇರುವ ವರೆಗೆ ಆಸನದಲ್ಲೇ ಇರಿ’’ ಎಂದು ಹೇಳುತ್ತಿರುವುದು ಕೇಳಿ ಬಂದಿದೆ.







