ಸೆ.12ರಿಂದ 7 ಹೆಚ್ಚುವರಿ ರೈಲುಗಳ ಸಂಚಾರ
![ಸೆ.12ರಿಂದ 7 ಹೆಚ್ಚುವರಿ ರೈಲುಗಳ ಸಂಚಾರ ಸೆ.12ರಿಂದ 7 ಹೆಚ್ಚುವರಿ ರೈಲುಗಳ ಸಂಚಾರ](https://www.varthabharati.in/sites/default/files/images/articles/2020/09/12/258806-1599849467.jpg)
ಬೆಂಗಳೂರು, ಸೆ.11: ವಿಶೇಷ ರೈಲುಗಳ ಜೊತೆಗೆ ಏಳು ಹೆಚ್ಚುವರಿ ರೈಲುಗಳು ನಾಳೆಯಿಂದ(ಸೆ.12) ಬೆಂಗಳೂರಿನಿಂದ ಸಂಚಾರ ಆರಂಭಿಸಲಿವೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.
ಬೆಂಗಳೂರು ವಿಭಾಗದಿಂದ 7 ರೈಲುಗಳು ನಾಳೆಯಿಂದ(ಸೆ.12) ಸಂಚಾರ ಆರಂಭಿಸಲಿವೆ. ಈ ಸೇವೆಯು ಸದ್ಯ ಸಂಚರಿಸುತ್ತಿರುವ ವಿಶೇಷ ರೈಲುಗಳ ಪಟ್ಟಿಗೆ ಹೆಚ್ಚುವರಿ ಸೇರ್ಪಡೆಯಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಪ್ರಸ್ತುತ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ವಿಕಲಚೇತನರು ಮತ್ತು ಮಕ್ಕಳನ್ನು ನಿಲ್ದಾಣಗಳಿಗೆ ಬಿಡಲು ಹಾಗೂ ಕರೆದುಕೊಂಡು ಹೋಗಲು ಜನರು ಆಗಮಿಸುತ್ತಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ನಿಲ್ದಾಣ, ಯಶವಂತಪುರ ಹಾಗೂ ಇತರ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಲ್ಲಿ ಕೂಡಲೇ ಪ್ಲಾಟ್ಫಾರ್ಮ್ ಟಿಕೆಟ್ಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದೆ.
ಕೋವಿಡ್–19 ಪರಿಸ್ಥಿತಿ ಇರುವುದರಿಂದಾಗಿ ಜನದಟ್ಟಣೆ ನಿಯಂತ್ರಿಸಲು ಪ್ಲಾಟ್ಫಾರ್ಮ್ ಟಿಕೆಟ್ ದರವನ್ನು 10 ರಿಂದ 50ಕ್ಕೆ ಹೆಚ್ಚಿಸಲಾಗಿದೆ ಎಂದೂ ಉಲ್ಲೇಖಿಸಿದೆ.