ಅಝರೆಂಕಾ, ಒಸಾಕಾ ಫೈನಲ್‌ಗೆ ಲಗ್ಗೆ
ಅಮೆರಿಕನ್ ಓಪನ್

ನ್ಯೂಯಾರ್ಕ್: ಬೆಲಾರಸ್‌ನ ವಿಕ್ಟೋರಿಯ ಅಝರೆಂಕಾ ಹಾಗೂ ಜಪಾನ್‌ನ ನವೊಮಿ ಒಸಾಕಾ ಅಮೆರಿಕನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಶನಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
ಸೆರೆನಾಗೆ ಸೋಲುಣಿಸಿದ ಅಝರೆಂಕಾ: ಗುರುವಾರ ರಾತ್ರಿ ನಡೆದ ಮಹಿಳೆಯರ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಸೋಲಿನಿಂದ ಬೇಗನೆ ಚೇತರಿಸಿಕೊಂಡ ಅಝರೆಂಕಾ ಅಮೆರಿಕದ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರನ್ನು 1-6, 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಸೋಲಿನೊಂದಿಗೆ ಈ ಬಾರಿ ತವರು ನೆಲದಲ್ಲಿ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಟೇಲರ್ ದಾಖಲೆಯನ್ನು ಸರಿಗಟ್ಟಬೇಕೆನ್ನುವ ಸೆರೆನಾರ ಕನಸು ಭಗ್ನವಾಯಿತು.
ಯುಎಸ್ ಓಪನ್‌ನಲ್ಲಿ ಮೂರನೇ ಬಾರಿ ಫೈನಲ್ ಸುತ್ತಿನಲ್ಲಿ ಆಡುವ ಅವಕಾಶ ಪಡೆದಿರುವ ಅಝರೆಂಕಾ 2012 ಹಾಗೂ 2013ರ ಫೈನಲ್‌ನಲ್ಲಿ ಸೆರೆನಾಗೆ ಸೋತಿದ್ದರು.
ಆರು ಬಾರಿ ಯುಎಸ್ ಓಪನ್ ಚಾಂಪಿಯನ್ ಆಗಿರುವ ಸೆರೆನಾ ಅರ್ಧಗಂಟೆಯಲ್ಲಿ ಮೊದಲ ಸೆಟ್‌ನ್ನು 6-1 ಅಂತರದಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದಿದ್ದರು. ಏಳು ವರ್ಷಗಳ ಬಳಿಕ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಆಡಿದ 31ರ ಹರೆಯದ ಅಝರೆಂಕಾ ತನ್ನ ಮೊದಲ ಸರ್ವ್ ಪಾಯಿಂಟ್‌ಗಳಲ್ಲಿ ಸುಮಾರು ಶೇ.75ರಷ್ಟು ಗೆಲುವು ಪಡೆದು, ಕೇವಲ ಒಂದು ಅನಗತ್ಯ ತಪ್ಪೆಸಗಿದರು. ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿರುವ ಅಝರೆಂಕಾ 2ನೇ ಹಾಗೂ ಮೂರನೇ ಸೆಟ್‌ನಲ್ಲಿ ಜಯ ಸಾಧಿಸಿ ಸೆರೆನಾಗೆ ಶಾಕ್ ನೀಡಿದರು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿ ಫೈನಲ್‌ನಲ್ಲಿ ಎರಡು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನವೊಮಿ ಒಸಾಕಾ ಅಮೆರಿಕದ ಯುವ ಆಟಗಾರ್ತಿ ಜೆನ್ನಿಫರ್ ಬ್ರಾಡಿ ವಿರುದ್ಧ ರೋಚಕ ಜಯ ಸಾಧಿಸಿ ಎರಡನೇ ಬಾರಿ ಯುಎಸ್ ಓಪನ್‌ನಲ್ಲಿ ಫೈನಲ್ ತಲುಪಿದರು.
ಗುರುವಾರ ರಾತ್ರಿ 2 ಗಂಟೆ, 8 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಒಸಾಕಾ ಅವರು ಬ್ರಾಡಿ ವಿರುದ್ಧ 7-6(7/1), 3-6, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.
ಯುಎಸ್ ಓಪನ್‌ನಲ್ಲಿ ಒಂದು ಸೆಟ್‌ನ್ನೂ ಸೋಲದೆ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದ ಬ್ರಾಡಿ ನಾಲ್ಕನೇ ಶ್ರೇಯಾಂಕದ ಒಸಾಕಾ ವಿರುದ್ಧ ಮೊದಲ ಸೆಟ್‌ನ್ನು ಟೈ-ಬ್ರೇಕರ್‌ನಲ್ಲಿ ಕಳೆದುಕೊಂಡರು. ಎರಡನೇ ಸೆಟನ್ನು ಗೆಲ್ಲಲು ಯಶಸ್ವಿಯಾದ ಬ್ರಾಡಿ ಪಂದ್ಯವನ್ನು ಮೂರನೇ ಸೆಟ್‌ಗೆ ವಿಸ್ತರಿಸಿದರು. ಆದರೆ, ಮೂರನೇ ಸೆಟ್ಟನ್ನು 3-6 ಅಂತರದಿಂದ ಸೋತರು.
ನಾಲ್ಕನೇ ಶ್ರೇಯಾಂಕದ ಒಸಾಕಾ ಎರಡು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಎರಡನೇ ಬಾರಿ ಯುಎಸ್ ಓಪನ್ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿರುವ ಒಸಾಕಾ ಕಳೆದ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಜನಾಂಗೀಯ ಅನ್ಯಾಯ ಹಾಗೂ ಪೊಲೀಸರ ದೌರ್ಜನ್ಯಕ್ಕೆ ಬಲಿಪಶುವಾಗಿರುವವರ ಗೌರವಾರ್ಥ ಟೂರ್ನಿಯುದ್ದಕ್ಕೂ ವಿಭಿನ್ನ ಮಾಸ್ಕ್ ಗಳನ್ನು ಧರಿಸಿ ಆಡಿದ್ದರು.







