ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯವು ಪೂರ್ಣಾಧಿಕಾರ ನೀಡುವ ಹಕ್ಕುಗಳಲ್ಲ : ಬಾಂಬೆ ಹೈಕೋರ್ಟ್

ಮುಂಬೈ: ಸಂವಿಧಾನದ 19ನೇ ವಿಧಿಯನ್ವಯ ನೀಡಲಾಗಿರುವ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ಪೂರ್ಣಾಧಿಕಾರ ನೀಡುವ ಹಕ್ಕುಗಳಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಟ್ವಿಟರ್ ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ನಿಂದನಾತ್ಮಕ ಪೋಸ್ಟ್ ಮಾಡಿದ್ದಾರೆಂಬ ಆರೋಪ ಹೊತ್ತ ಮಹಿಳೆಗೆ ಬಂಧನದಿಂದ ಮಧ್ಯಂತರ ವಿನಾಯಿತಿ ಒದಗಿಸಲು ನಿರಾಕರಿಸುವ ವೇಳೆ ನ್ಯಾಯಾಲಯ ಮೇಲಿನಂತೆ ಹೇಳಿದೆ.
ಆದರೆ ಆರೋಪಿ ಮಹಿಳೆಯನ್ನು ಕನಿಷ್ಠ ಮುಂದಿನ ಎರಡು ವಾರಗಳ ತನಕ ಬಂಧಿಸುವುದಿಲ್ಲ ಎಂದು ರಾಜ್ಯ ಸರಕಾರ ನೀಡಿರುವ ಮೌಖಿಕ ಭರವಸೆಯನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಹಾಗೂ ಎಂ ಎಸ್ ಕರ್ಣಿಕ್ ಅವರ ಪೀಠ ಒಪ್ಪಿದೆ. ಆದರೆ ಈ ಅವಧಿಯಲ್ಲಿ ಆಕೆ ಪೊಲೀಸ್ ಠಾಣೆಗಳಿಗೆ ತೆರಳಿ ವಿಚಾರಣೆಗೆ ಪೊಲೀಸರ ಜತೆ ಸಹಕರಿಸಬೇಕೆಂದು ನ್ಯಾಯಾಲಯ ಹೇಳಿದೆ. ಅದೇ ಸಮಯ ಆಕೆಯ ವಿರುದ್ಧ ಪೊಲೀಸರು ಯಾವುದಾದರೂ ಬಲವಂತದ ಕ್ರಮ ಕೈಗೊಂಡಲ್ಲಿ ಆಕೆ ಮತ್ತೆ ನ್ಯಾಯಾಲಯದ ಮೊರೆ ಹೋಗಬಹುದು ಎಂದೂ ನ್ಯಾಯಪೀಠ ಹೇಳಿದೆ.
ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನೂ ಕೈಬಿಡಬೇಕೆಂದು ಕೋರಿ ಮಹಿಳೆ ಬಾಂಬೆ ಹೈಕೋರ್ಟಿನ ಕದ ತಟ್ಟಿದ್ದರು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 29ಕ್ಕೆ ನಿಗದಿ ಪಡಿಸಿದೆ.





