28.56ಕಿ.ಮೀ. ಹೊಸ ರಸ್ತೆ ಅಭಿವೃದ್ಧಿ: ಸಂಸದೆ ಶೋಭಾ
ಉಡುಪಿ, ಸೆ.12: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ 3ನೇ ಹಂತದಲ್ಲಿ ಒಟ್ಟು 28.56 ಕಿಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಾಂಕೇತಿಕವಾಗಿ ಕೆಲವು ರಸ್ತೆಗಳಿಗೆ ಶಿಲಾನ್ಯಾಸ ನೆರವೇರಿಸಿದ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಒಟ್ಟು ಎಂಟು ಪ್ರಮುಖ ರಸ್ತೆಗಳ ಒಟ್ಟು 28.56 ಕಿ.ಮೀ. ಉದ್ದದ ಭಾಗವನ್ನು ಸರ್ವಋತು ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದಕ್ಕಾಗಿ 4640.67 ಲಕ್ಷ ರೂ. ಅನುದಾನ ಮಂಜೂರಾಗಿದೆ. ರಸ್ತೆಗಳನ್ನು ಅಭಿವೃದ್ಧಿ ಪಡಿಸುವಾಗ ಅಗತ್ಯವಿದ್ದಲ್ಲಿ ಕಿರು ಸೇತುವೆ, ಮೋರಿ ಇತ್ಯಾದಿಗಳನ್ನು ಕೂಡಾ ನಿರ್ಮಿಸಲಾಗುತ್ತದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕಾರ್ಕಳ ತಾಲೂಕಿನ ಮುಲ್ಲಡ್ಕ-ನಾನಿಲ್ತಾರ್-ಕಾಂಜರಕಟ್ಟೆ ರಸ್ತೆ, ಬಂಗ್ಲೆ ಗುಡ್ಡೆ- ಬಟ್ಟಹೊಳೆ ರಸ್ತೆ, ಉದ್ದಪಲ್ಕೆ-ಪೆಲತ್ತಜೆ-ಮಲಂತಗುತ್ತು ರಸ್ತೆ, ಮುದ್ರಾಡಿ-ಉಪ್ಪಳ ಸೇತುವೆ ಸಹಿಹತ ರಸ್ತೆ, ಅಲ್ಬಾಡಿ-ಮಾರೂರು-ಕೊಡಬೈಲು ರಸ್ತೆ ಮತ್ತು ಸೇತುವೆ, ಕುಂತಳ ನಗರ-ಮದ್ವನಗರ-ಬಂಟಕಲ್ಲು ಮಧ್ಯೆ ಸೇತುವೆ ಸಹಿತ ರಸ್ತೆಯನ್ನು ಪಿಎಂಜಿಎಸ್‌ವೈ-3ರಡಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ಎರಡು ವಾರಗಳಲ್ಲಿ ಎಲ್ಲಾ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.





