ಮಹಾರಾಷ್ಟ್ರದ ಉಸ್ತುವಾರಿ ಸ್ಥಾನದಿಂದ ಕೈಬಿಟ್ಟ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು ಹೀಗೆ...

ಬೆಂಗಳೂರು, ಸೆ. 12: `ನಾನು ತತ್ವ, ಆದರ್ಶಗಳನ್ನಿಟ್ಟುಕೊಂಡಿದ್ದು, ಎಲ್ಲವೂ ನನಗೆ ಸಿಗಬೇಕೆಂಬ ಆಸೆಯನ್ನು ನಾನು ಹೊಂದಿಲ್ಲ. ಮಹಾರಾಷ್ಟ್ರ ರಾಜ್ಯದ ಉಸ್ತುವಾರಿ ಸ್ಥಾನದಿಂದ ನನ್ನನ್ನು ಕೈಬಿಟ್ಟಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ' ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಎಲ್ಲವೂ ನಮ್ಮ ಕೈಯಲ್ಲಿ ಇರುವುದಿಲ್ಲ. ಪಕ್ಷದ ವರಿಷ್ಟರ ತೀರ್ಮಾನಕ್ಕೆ ಬದ್ಧ. ನಾನೂ ನೆಹರು, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯಕ್ಕೆ ಬದ್ಧನಾಗಿರುವವನು. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಅನುಷ್ಠಾನಕ್ಕೆ ತರಲು ಯಾರೇ ಇರಲಿ, ಅದಕ್ಕೆ ನನ್ನ ಸಹಮತವಿದೆ' ಎಂದು ಇದೇ ವೇಳೆ ತಿಳಿಸಿದರು.
'ಪಕ್ಷದಲ್ಲಿ ಹುದ್ದೆ ಸಿಗಲಿಲ್ಲ ಎಂದು ನಾನು ವ್ಯಥೆ ಪಟ್ಟವನೂ ಅಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಇರಬೇಕು. ಆ ದಿಕ್ಕಿನಲ್ಲೇ ನಾನು ಮುನ್ನಡೆದಿರುವವನು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನು ಬೇಡಿಕೆ ಇಟ್ಟಿಲ್ಲ. ಆ ಸ್ಥಾನದಲ್ಲಿ ಈಗಾಗಲೇ ಗುಲಾಂ ನಬಿ ಆಝಾದ್ ಇದ್ದಾರೆ. ಅದರ ಬಗ್ಗೆ ವರಿಷ್ಟರು ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.





