ಸೆ.15ರಂದು ಮಣಿಪಾಲದಲ್ಲಿ ‘ಉಡುಪಿ ಸೀರೆ’ಗಳ ಪ್ರದರ್ಶನ
ಉಡುಪಿ, ಸೆ.12: ಪ್ರಧಾನಮಂತ್ರಿಗಳು ನೀಡಿದ ಕರೆಯಂತೆ ‘ವೋಕಲ್ ಫಾರ್ ಲೋಕಲ್’ ಕಾರ್ಯಕ್ರಮದಡಿ ಉಡುಪಿ ಕೈಮಗ್ಗದ ಸೀರೆಗಳ ಪ್ರದರ್ಶನ ವನ್ನು ಉಡುಪಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ ಮತ್ತು ಕೈಮಗ್ಗ ನೇಕಾರರ ಸಹಕಾರಿ ಸಂಘಗಳ ಆಶ್ರಯದಲ್ಲಿ ಸೆ.15ರಂದು ಬೆಳಗ್ಗೆ 10:30ಕ್ಕೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಉಡುಪಿ ಕೈಮಗ್ಗ ಸೀರೆಗಳು ನಮ್ಮದೇ ನೇಕಾರರ ವಿಶಿಷ್ಟ ಕಲೆಯಾಗಿದ್ದು, ಈ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಡುಪಿ ಜಿಪಂನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಯ ವಿಶೇಷ ಆಸಕ್ತಿಯಿಂದ ಈ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಉದ್ಘಾಟಿಸ ಲಿದ್ದು, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೊಟ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಕೈಮಗ್ಗ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





