ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಯಾಕೂಬ್ ಮಾಸ್ಟರ್ ಗೆ ದಾರಿಮಿ ಒಕ್ಕೂಟದಿಂದ ಸನ್ಮಾನ

ಬೆಳ್ತಂಗಡಿ : ತಾಲೂಕಿನ ನಡ ಗ್ರಾಮದ ಸರಕಾರಿ ಪ್ರೌಢ ಶಾಲೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಲು ಕಾರಣರಾದ ಯಾಕೂಬ್ ಮಾಸ್ಟರ್ ಕೊಯ್ಯೂರು ಅವರನ್ನು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಇದರ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಅತ್ಯಾಧುನಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಸರಕಾರಿ ಶಾಲೆಗೆ ಅತ್ಯಾಧುನಿಕತೆಯ ಸ್ಪರ್ಶ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ಯಾಕೂಬ್ ರಿಗೆ ಸಲ್ಲುತ್ತದೆ ಎಂದು ಒಕ್ಕೂಟ ತಿಳಿಸಿದೆ.
ಕಾರ್ಯಕ್ರಮ ದಲ್ಲಿ ಮಾತಾಡಿದ ರಾಜ್ಯ ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್ ಬಿ ಮುಹಮ್ಮದ್ ದಾರಿಮಿ ಮಾತಾಡಿ ಇದೊಂದು ಅದ್ಭುತ ವಾದ ಸಾಹಸ. ಮನಸ್ಸು ಮಾಡಿದರೆ ಎಂತಹಾ ಸಾಧನೆಯನ್ನು ಮಾಡಬಹುದೆಂದು ಯಾಕೂಬ್ ಅವರು ನಿರೂಪಿಸಿದ್ದಾರೆ. ಇದು ನಮ್ಮ ರಾಜ್ಯಕ್ಕೆ ಹೆಮ್ಮೆ ಪಡುವ ವಿಚಾರ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಾಕೂಬ್ ಮಾಸ್ಟರ್ ನಿಮ್ಮ ಸನ್ಮಾನವು ನನಗೆ ಆಶಿರ್ವಾದ ಎಂದು ಭಾವಿಸುತ್ತೇನೆ. ಹಾಗೇ ಇನ್ನಷ್ಟು ಸಾಧನೆಗಳನ್ನು ಮಾಡುವ ಉದ್ದೇಶವಿದೆ. ಅದಕ್ಕೆಲ್ಲಾ ಪ್ರೇರಣೆ ಗುರು ಹಿರಿಯರ ಆಶಿರ್ವಾದ ಎಂದು ವಿವರಿಸಿದರು. ಉತ್ತಮ ಸಮಾಜವನ್ನು ಸಿದ್ಧಪಡಿಸಲು ಶಿಕ್ಷಕ ವೃತ್ತಿಗಿಂತ ಉತ್ತಮ ಆಯ್ಕೆ ಬೇರೆ ಇಲ್ಲ. ನಾನು ನನ್ನ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ಮಾಡುತ್ತೇನೆ. ಆದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಇದಕ್ಕೆ ಅನೇಕ ಮಂದಿಯ ಸಹಕಾರ ಮರೆಯಲಾಗದು. ಸಮಾಜದ ಉಲಮಾಗಳು ಶಿಕ್ಷಣಕ್ಕೆ ಹೆಚ್ವು ಪ್ರೋತ್ಸಾಹ ನೀಡುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ ಎಂದರು.
ಕಾರ್ಯಕ್ರಮ ದಲ್ಲಿ ಒಕ್ಕೂಟದ ಪ್ರ. ಕಾರ್ಯದರ್ಶಿ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು, ತಬೂಕು ದಾರಿಮಿ ಉಸ್ತಾದ್, ಕೆ ಎಲ್ ಉಮರ್ ದಾರಿಮಿ ಉಪಸ್ಥಿತರಿದ್ದರು.








