ದ.ಕ. ಜಿಲ್ಲೆ : 401 ಮಂದಿಗೆ ಕೊರೋನ ಸೋಂಕು, ಕೋವಿಡ್‌ಗೆ ಮತ್ತೆ ಐವರು ಬಲಿ

ಮಂಗಳೂರು, ಸೆ.12: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಶನಿವಾರ 401 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದ್ದರೆ, ಕೋವಿಡ್‌ಗೆ ಮತ್ತೆ ಐವರು ಮೃತಪಟ್ಟಿದ್ದಾರೆ. 204 ಮಂದಿ ಕೊರೋನಮುಕ್ತರಾಗಿದ್ದಾರೆ.
ಮೃತರಲ್ಲಿ ಮಂಗಳೂರು ತಾಲೂಕಿನ ಮೂವರು, ಸುಳ್ಯ ತಾಲೂಕು ಹಾಗೂ ಹೊರಜಿಲ್ಲೆಯ ತಲಾ ಓರ್ವರು ಇದ್ದಾರೆ. ಮೃತರೆಲ್ಲ ಕೋವಿಡ್ ಸೋಂಕಿತರಾಗಿದ್ದು, ಒಂದಲ್ಲ ಒಂದು ರೋಗದಿಂದ ಬಳಲುತ್ತಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 439ಕ್ಕೆ ಏರಿಕೆಯಾಗಿದೆ.
401 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಕೊರೋನ ಸೋಂಕು ವ್ಯಾಪಕಗೊಳ್ಳುತ್ತಿದ್ದು, ಶನಿವಾರ 401 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಸಾಮಾನ್ಯ ಶೀತ ಲಕ್ಷಣ (210) ಹೊಂದಿದವರಿದ್ದಾರೆ. ಐಎಲ್‌ಐ ಪ್ರಕರಣದಲ್ಲಿ ಇದು ಒಂದು ದಿನದಲ್ಲಿ ದಾಖಲಾದ ಅತಿಹೆಚ್ಚು ಸಂಖ್ಯೆಯಾಗಿದೆ. ಇನ್ನು ಸೋಂಕಿತರ ಸಂಪರ್ಕದಲ್ಲಿದ್ದ 97, ತೀವ್ರ ಉಸಿರಾಟ ತೊಂದರೆಯ 18 ಮಂದಿ ಇದ್ದರೆ, 76 ಮಂದಿಗೆ ಸೋಂಕು ಎಲ್ಲಿಂದ ಹರಡಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಪತ್ತೆ ಕಾರ್ಯದಲ್ಲಿ ತೊಡಗಿದೆ.
155 ಪುರುಷರು, 90 ಮಹಿಳೆಯರು ಸೇರಿದಂತೆ 245 ಮಂದಿಯಲ್ಲಿ ಕೊರೋನ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಇನ್ನು 82 ಪುರುಷರು, 74 ಮಹಿಳೆಯರು ಸೇರಿದಂತೆ 156 ಮಂದಿಯಲ್ಲಿ ಕೊರೋನ ಲಕ್ಷಣಗಳು ಕಂಡುಬಂದಿಲ್ಲ.
ಮಂಗಳೂರು ತಾಲೂಕಿನಲ್ಲಿ 227 ಮಂದಿಗೆ ಪಾಸಿಟಿವ್ ಬಂದಿದೆ. ಇನ್ನು, ಬಂಟ್ವಾಳ-47, ಪುತ್ತೂರು-52, ಸುಳ್ಯ-30, ಬೆಳ್ತಂಗಡಿ-24, ಹೊರಜಿಲ್ಲೆಯ 21 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16,959ಕ್ಕೆ ಏರಿಕೆಯಾಗಿದೆ.
204 ಮಂದಿ ಗುಣಮುಖ: ಆರೋಗ್ಯಕರ ಬೆಳವಣಿಗೆಯಲ್ಲಿ ಜಿಲ್ಲೆಯಲ್ಲಿ ಕೊರೋನದಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಶನಿವಾರವೂ 204 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ 157, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 47 ಮಂದಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ 12,813 ಮಂದಿ ಕೊರೋನ ಮುಕ್ತರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ 3,707 ಸಕ್ರಿಯ ಪ್ರಕರಣಗಳಿವೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.







