ಗಾಂಜಾ ಮಾರಾಟ ಆರೋಪ: ಓರ್ವನ ಬಂಧನ, 1 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಚಿಕ್ಕಮಗಳೂರು, ಸೆ.12: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ತನಿಖೆ ಚುರುಕಾಗುತ್ತಿರುವಂತೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಗಾಂಜಾ ಮಾರಾಟ ಜಾಲದ ಬೆನ್ನು ಬಿದ್ದಿದ್ದು, ಎರಡು ದಿನಗಳ ಹಿಂದೆ ಗಾಂಜಾ ಮಾರುತ್ತಿದ್ದ ಯುವಕನನ್ನು ಬಂಧಿಸಿದ ಬೆನ್ನಲ್ಲೇ ಶನಿವಾರ ಮತ್ತೋರ್ವ ಗಾಂಜಾ ಮಾರಾಟಗಾರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಗೌರಿ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಓರ್ವ ಯುವಕನನ್ನು ಬಂಧಿಸಿರುವ ಬಸವನಹಳ್ಳಿ ಠಾಣೆಯ ಪೊಲೀಸರು ಆರೋಪಿಯಿಂದ 2 ಕೆಜಿ 200 ಗ್ರಾಂ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಗೌರಿ ಕಾಲುವೆ ಬಡಾವಣೆಯ ದೊಡ್ಡ ಕಾಲುವೆ ರಸ್ತೆಯ ನಿವಾಸಿ ಹನೀಫ್(46) ಬಂಧಿತ ಆರೋಪಿಯಾಗಿದ್ದು, ಈತ ತನ್ನ ಮನೆ ಸಮೀಪದಲ್ಲಿ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಸವನಹಳ್ಳಿ ಪೊಲೀಸರ ತಂಡ, ಶನಿವಾರ ಹನೀಫ್ ತನ್ನ ಗ್ರಾಹಕರಿಗೆ ಮಾರಾಟ ಮಾಡುವ ಸಲುವಾಗಿ ಮನೆಯಿಂದ ಗಾಂಜಾ ಸೊಪ್ಪನ್ನು ಕೊಂಡೊಯ್ಯುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿದು ಬಂದಿದೆ.
ಬಂಧಿತ ಆರೋಪಿ ಹನೀಫ್‍ನಿಂದ ಪೊಲೀಸರು ವಶಪಡಿಸಿಕೊಂಡ 2ಕೆಜಿ 200 ಗಾಂಜಾದ ಮೌಲ್ಯ ಸುಮಾರು 1 ಲಕ್ಷ ಎಂದು ತಿಳಿದುಬಂದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಸುತೇಶ್ ಕೆ.ಪಿ ಹಾಗೂ ಠಾಣೆಯ ಪೊಲೀಸ್ ಪೇದೆಗಳು ಭಾಗವಹಿಸಿದ್ದರು.







