ಬಿಗಡಾಯಿಸಿದ ಕೊರೋನ ವೈರಸ್ ಪರಿಸ್ಥಿತಿ: ಫ್ರಾನ್ಸ್ ಪ್ರಧಾನಿ ಎಚ್ಚರಿಕೆ

Photo: twitter.com/JeanCASTEX/photo
ಪ್ಯಾರಿಸ್ (ಫ್ರಾನ್ಸ್), ಸೆ. 12: ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ಫ್ರಾನ್ಸ್ ನಲ್ಲಿ ಸಾಂಕ್ರಾಮಿಕದ ತೀವ್ರತೆ ಹೆಚ್ಚುತ್ತಿದೆ ಎಂದು ಆ ದೇಶದ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಶುಕ್ರವಾರ ಹೇಳಿದ್ದಾರೆ. ಆದರೆ, ಮತ್ತೊಮ್ಮೆ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರುವುದನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ನುಡಿದರು.
‘‘ಫ್ರಾನ್ಸ್ ನಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಬಿಗಡಾಯಿಸುತ್ತಿರುವುದು ಸ್ಪಷ್ಟವಾಗಿದೆ. ಅದು ಈಗಲೂ ತನ್ನ ತೀವ್ರತೆಯನ್ನು ಕಳೆದುಕೊಂಡಿಲ್ಲ. ಹಾಗಾಗಿ, ಇನ್ನೂ ಕೆಲವು ತಿಂಗಳ ಕಾಲ ಅದು ನಮ್ಮೊಂದಿಗೆ ಇರುವುದು ಖಚಿತವಾಗಿದೆ’’ ಎಂದು ಪ್ಯಾರಿಸ್ನಲ್ಲಿ ಟೆಲಿವಿಶನ್ ಮೂಲಕ ನೀಡಿದ ಹೇಳಿಕೆಯೊಂದರಲ್ಲಿ ಪ್ರಧಾನಿ ಹೇಳಿದ್ದಾರೆ.
ಆದರೆ, ಅವರು ಯಾವುದೇ ನಿರ್ಬಂಧಕ ಕ್ರಮಗಳನ್ನು ಘೋಷಿಸಲಿಲ್ಲ. ‘‘ಮತ್ತೊಮ್ಮೆ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿಕೆಯನ್ನು ನಿವಾರಿಸುವುದು ಹಾಗೂ ಸುರಕ್ಷಿತ ಅಂತರ, ಮುಖಗವಸು ಧರಿಸುವಿಕೆ ಮತ್ತು ಹೆಚ್ಚಿನ ಪರೀಕ್ಷೆಗಳ ಮೂಲಕ ವೈರಸ್ನೊಂದಿಗೆ ಯಶಸ್ವಿಯಾಗಿ ಜೀವಿಸುವುದನ್ನು ಕಲಿಯುವುದು ನಮ್ಮ ಉದ್ದೇಶವಾಗಿದೆ’’ ಎಂದರು.





