ಯುಎಇಯ ಮಾದರಿ ಅನುಸರಿಸಿ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಂಡ ಬಹರೈನ್

ಮನಾಮ (ಬಹರೈನ್), ಸೆ. 12: ಯುಎಇಯ ಮಾದರಿಯನ್ನು ಅನುಸರಿಸಿರುವ ಬಹರೈನ್, ಇಸ್ರೇಲ್ ಜೊತೆಗಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರಲು ಒಪ್ಪಿಕೊಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಬಹರೈನ್ ದೊರೆ ಹಾಮದ್ ಬಿನ್ ಇಸಾ ಅಲ್ ಖಲೀಫ ಜೊತೆ ಮಾತನಾಡಿದ ಬಳಿಕ, ಒಪ್ಪಂದ ಏರ್ಪಟ್ಟಿತು ಎಂದು ಜಂಟಿ ಹೇಳಿಕೆಯೊಂದರಲ್ಲಿ ಅಮೆರಿಕ, ಬಹರೈನ್ ಮತ್ತು ಇಸ್ರೇಲ್ ಹೇಳಿವೆ.
ಈ ಒಪ್ಪಂದವು ‘ಐತಿಹಾಸಿಕ ಮಹತ್ವದ ಕ್ಷಣ’ ಎಂಬುದಾಗಿ ಟ್ರಂಪ್ ಬಣ್ಣಿಸಿದ್ದಾರೆ.
ಒಂದು ತಿಂಗಳ ಹಿಂದೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವುದಾಗಿ ಘೋಷಿಸಿತ್ತು. ಆ ಮೂಲಕ ಇಸ್ರೇಲ್‌ನೊಂದಿಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಒಪ್ಪಿಕೊಂಡ ಮೊದಲು ಕೊಲ್ಲಿ ಅರಬ್ ದೇಶವಾಗಿತ್ತು.
ಈಜಿಪ್ಟ್, ಜೋರ್ಡಾನ್ ಮತ್ತು ಯುಎಇ ಬಳಿಕ, ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿರುವ ನಾಲ್ಕನೇ ಅರಬ್ ದೇಶ ಬಹರೈನ್ ಆಗಿದೆ.
ಫೆಲೆಸ್ತೀನಿಯರ ಬೆನ್ನಿಗೆ ಚೂರಿ: ನಾಯಕರು
ಸಂಬಂಧಗಳನ್ನು ಸಾಮಾನ್ಯ ಸ್ಥಿತಿಗೆ ತರಲು ಇಸ್ರೇಲ್ ಮತ್ತು ಯುಎಇ ಮಾಡಿಕೊಂಡಿರುವ ಒಪ್ಪಂದವನ್ನು ಫೆಲೆಸ್ತೀನಿಯನ್ ಪ್ರಾಧಿಕಾರ ಖಂಡಿಸಿದೆ ಹಾಗೂ ಇದು ಅರಬ್ ದೇಶವೊಂದು ನಡೆಸಿದ ಇನ್ನೊಂದು ವಿಶ್ವಾಸದ್ರೋಹ ಎಂಬುದಾಗಿ ಬಣ್ಣಿಸಿದೆ.
‘‘ಈ ಒಪ್ಪಂದದ ಮೂಲಕ ಫೆಲೆಸ್ತೀನ್ ಹೋರಾಟ ಮತ್ತು ಫೆಲೆಸ್ತೀನ್ ಜನರ ಬೆನ್ನಿಗೆ ಇರಿಯಲಾಗಿದೆ. ಕಳೆದ ತಿಂಗಳು ಏರ್ಪಟ್ಟ ಯುಎಇ-ಇಸ್ರೇಲ್ ಒಪ್ಪಂದದಂತೆ ಇದು ಕೂಡ ಫೆಲೆಸ್ತೀನಿಯರಿಗೆ ಎಸಗಿದ ವಿಶ್ವಾಸದ್ರೋಹವಾಗಿದೆ’’ ಎಂದು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನೆಲೆ ಹೊಂದಿರುವ ಫೆಲೆಸ್ತೀನ್ ಪ್ರಾಧಿಕಾರದ ಸಾಮಾಜಿಕ ವ್ಯವಹಾರಗಳ ಸಚಿವ ಅಹ್ಮದ್ ಮಜ್ದಲಾನಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ಹೇಳಿದರು.
ಈ ಒಪ್ಪಂದವು ಫೆಲೆಸ್ತೀನಿಯರ ಮೇಲೆ ನಡೆಸಿದ ಆಕ್ರಮಣವಾಗಿದೆ ಎಂದು ಹೇಳಿರುವ, ಗಾಝಾ ಪಟ್ಟಿಯ ಮೇಲೆ ನಿಯಂತ್ರಣವನ್ನು ಹೊಂದಿರುವ ಹಮಾಸ್, ಒಪ್ಪಂದದಿಂದ ಫೆಲೆಸ್ತೀನಿಯರ ಹೋರಾಟಕ್ಕೆ ‘ಗಂಭೀರ ಹಿನ್ನಡೆ’ಯಾಗಿದೆ ಎಂದಿದೆ.