ವಿಮಾ ಹಣಕ್ಕಾಗಿ ಕೈಯನ್ನೇ ಕತ್ತರಿಸಿಕೊಂಡ ಮಹಿಳೆ!

ಲ್ಯುಬಿಜಾನ (ಸ್ಲೊವೇನಿಯ), ಸೆ. 12: ವಿಮಾ ಹಣವನ್ನು ಪಡೆಯುವುದಕ್ಕಾಗಿ ತನ್ನ ಒಂದು ಕೈಯನ್ನು ಸ್ವತಃ ಕತ್ತರಿಸಿಕೊಂಡಿರುವುದಕ್ಕಾಗಿ ಸ್ಲೊವೇನಿಯ ದೇಶದ ನ್ಯಾಯಾಲಯವೊಂದು ಶುಕ್ರವಾರ 22 ವರ್ಷದ ಮಹಿಳೆಯೊಬ್ಬರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜುಲಿಜಾ ಅಡ್ಲೆಸಿಕ್ ಎಂಬ ಮಹಿಳೆಯು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು 2019ರ ಆದಿ ಭಾಗದಲ್ಲಿ ವೃತ್ತಾಕಾರದ ಗರಗಸದ ಮೂಲಕ ತನ್ನ ಎಡಗೈಯನ್ನು ಮಣಿಕಟ್ಟಿನಿಂದ ಮೇಲ್ಭಾಗದಲ್ಲಿ ಕತ್ತರಿಸಿಕೊಂಡಿದ್ದಾರೆ ಎಂದು ರಾಜಧಾನಿ ಲ್ಯುಬಿಜಾನದ ಜಿಲ್ಲಾ ನ್ಯಾಯಾಲಯವೊಂದು ತಿಳಿಸಿದೆ. ಬಳಿಕ, ವಿಮಾ ಹಣವನ್ನು ಪಡೆಯಲು ಆಕೆ ಈ ಕೃತ್ಯಕ್ಕೆ ಇಳಿದಿರುವುದು ಪತ್ತೆಯಾಗಿತ್ತು.
ಕೈ ಕತ್ತರಿಸುವುದಕ್ಕೂ ಒಂದು ವರ್ಷ ಮೊದಲು ಅವರು 5 ವಿವಿಧ ವಿಮಾ ಕಂಪೆನಿಗಳ ಪಾಲಿಸಿಗಳನ್ನು ಪಡೆದುಕೊಂಡಿದ್ದರು. ಅವರಿಗೆ ಒಂದು ಮಿಲಿಯ ಯುರೋ (ಸುಮಾರು 9 ಕೋಟಿ ರೂಪಾಯಿ)ಗಿಂತಲೂ ಹೆಚ್ಚಿನ ವಿಮಾ ಹಣ ಸಿಗಲಿದೆ. ಇದರ ಅರ್ಧ ಭಾಗದಷ್ಟು ಹಣ ತಕ್ಷಣ ಸಿಕ್ಕಿದೆ ಹಾಗೂ ಉಳಿದ ಹಣವನ್ನು ಪ್ರತಿ ತಿಂಗಳು ಕಂತುಗಳಲ್ಲಿ ಕೊಡಲಾಗುತ್ತದೆ.
ಆಕೆಯ ಪ್ರಿಯಕರನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಹಾಗೂ ಆತನ ತಂದೆಗೆ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ತಂದೆಯ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿದೆ.







