ಕೋವಿಡ್19: ಬೆಂಗಳೂರಿನಲ್ಲಿಂದು 3,552 ಮಂದಿಗೆ ಪಾಸಿಟಿವ್, 21 ಮಂದಿ ಮೃತ್ಯು

ಬೆಂಗಳೂರು, ಸೆ.12: ದೇಶದಲ್ಲಿಯೇ ಎರಡನೇ ಅತೀ ಹೆಚ್ಚು ಸಕ್ರಿಯ ಪ್ರಕರಣಗಳಿರುವ ನಗರ ಎಂಬ ಅಪಕೀರ್ತಿಗೆ ಪಾತ್ರವಾಗಿರುವ ಬೆಂಗಳೂರಿನಲ್ಲಿ ಕೊರೋನ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಡುಗಡೆಯಾಗುತ್ತಿರುವವರ ಪ್ರಮಾಣ ಕಡಿಮೆಯಾಗುತ್ತಲೆ ಇದೆ.
ನಗರದಲ್ಲಿ ಶನಿವಾರದಂದು 3,552 ಜನರಿಗೆ ಕೊರೋನ ಸೋಂಕು ದೃಢಪಟ್ಟಿದೆ. 3,538 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಸೋಂಕಿಗೆ 21 ಜನರು ಮೃತರಾಗಿದ್ದಾರೆ.
ನಗರದಲ್ಲಿ ಒಟ್ಟು 1,67,183 ಜನರಿಗೆ ಸೋಂಕು ದೃಢಪಟ್ಟಿದ್ದು, ಇಲ್ಲಿಯವರೆಗೆ 2,391 ಜನರು ಸೋಂಕಿಗೆ ಬಲಿಯಾಗಿದ್ದಾರೆ. 1,23,862 ಜನರು ಇಲ್ಲಿಯವರೆಗೆ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 40,929 ಕೊರೋನ ಸೋಂಕಿತರು ಸಕ್ರಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 150 ಜ್ವರಚಿಕಿತ್ಸಾಲಯದಲ್ಲಿ ಒಟ್ಟು 2,15,787 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ.
ಶುಕ್ರವಾರದ ಬಿಬಿಎಂಪಿ ಕೋವಿಡ್ ವರದಿಯಲ್ಲಿ ನಗರದಲ್ಲಿ ಒಟ್ಟು ಸಕ್ರಿಯ 19,680 ಕಂಟೈನ್ಮೆಂಟ್ ಝೋನ್‍ಗಳಿವೆ. ಇದುವರೆಗೂ 29,588 ಕಂಟೈನ್ಮೆಂಟ್ ಝೋನ್‍ಗಳನ್ನು ಗುರುತಿಸಲಾಗಿದೆ.
ನಗರದಲ್ಲಿ ಒಟ್ಟು 4,51,459 ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ದ್ವಿತೀಯ ಸಂಪರ್ಕಿತ 5,63,093 ಜನರನ್ನು ಗುರುತಿಸಲಾಗಿದೆ. ನಗರದಲ್ಲಿ 11,59,493 ಜನರಿಗೆ ಕೊರೋನ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಪಾಸಿಟಿವ್ ಪ್ರಮಾಣ ಶೇ.14.09ರಷ್ಟಿದೆ. ಕೊರೋನ ಸೋಂಕಿಗೆ ಮೃತರಾಗುತ್ತಿರುವ ಪ್ರಮಾಣ ಶೇ.1.45ರಷ್ಟಿದ್ದು, ಗುಣಮುಖರಾಗುತ್ತಿರುವ ಪ್ರಮಾಣ ಶೇ.73.53ರಷ್ಟಿದೆ.







