ಬಿಬಿಎಂಪಿಯ ಹೊಸ ಕೆಎಂಸಿ ಕಾಯ್ದೆ: ವಾರ್ಡ್ ಕಮಿಟಿಗಳ ಅಧಿಕಾರ ಮೊಟಕುಗೊಳಿಸದಂತೆ ಆಗ್ರಹ

ಬೆಂಗಳೂರು, ಸೆ.12: ಸರಕಾರದ ಜಂಟಿ ಸಮಿತಿಯಿಂದ ಬಿಬಿಎಂಪಿಗೆ ಜಾರಿಗೊಳಿಸುತ್ತಿರುವ ಹೊಸ ಕೆಎಂಸಿ ಕಾಯ್ದೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ವಾರ್ಡ್ ಕಮಿಟಿಗಳ ಅಧಿಕಾರ ಮೊಟಕುಗೊಳಿಸಬಾರದು ಎಂದು ಬಿಬಿಎಂಪಿ ಮಾಜಿ ಮೇಯರ್ ಹಾಗೂ ಕಾರ್ಪೋರೇಟರ್ ಗಳು ಆಗ್ರಹಿಸಿದರು.
ನಗರದ ಸಮಗ್ರ ಅಭಿವೃದ್ಧಿ ಕುರಿತು ಶನಿವಾರ ಜನಾಗ್ರಹ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಈ ಕುರಿತು ನಿರ್ಧರಿಸಲಾಯಿತು.
ಪ್ರತಿ ವಾರ್ಡ್ ಗಳಲ್ಲಿ ಸರ್ವ ಪಕ್ಷಗಳ ಮುಖಂಡರು ಹಾಗೂ ವಾರ್ಡ್ ನ ಎಲ್ಲ ಬೀದಿಗಳಿಗೆ ಒಬ್ಬ ವ್ಯಕ್ತಿಯನ್ನು ಒಳಗೊಂಡ ವಾರ್ಡ್ ಸಮಿತಿ ರಚನೆಯಾಗುತ್ತದೆ. ಇದರಿಂದ ವಾರ್ಡ್ ನ ಸಮಸ್ಯೆಗಳನ್ನು ತಿಳಿದುಕೊಳ್ಳುವ ಮತ್ತು ಪರಿಹಾರಕ್ಕೂ ಕೆಲವು ಸಲಹೆಗಳನ್ನು ಪಡೆಯಲು ನೆರವಾಗಲಿದೆ. ಹೀಗಾಗಿ ವಾರ್ಡ್ ಕಮಿಟಿ ಅಧಿಕಾರ ಬಲಪಡಿಸುವಂತೆ ಮಾಜಿ ಮೇಯರ್ ಗಳಾದ ಎಂ. ಗೌತಮ್ ಕುಮಾರ್, ಗಂಗಾಂಬಿಕೆ ಮಲ್ಲಿಕಾರ್ಜುನ್ ಸೇರಿ ಹಲವು ಮಾಜಿ ಕಾರ್ಪೋರೇಟರ್ ಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ನಾವು ಅಧಿಕಾರದಲ್ಲಿದ್ದಾಗ 500 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಭೂಗಳ್ಳರಿಂದ ವಶಕ್ಕೆ ಪಡೆದು ಪಾಲಿಕೆಗೆ ಖಾತೆ ಮಾಡಿಸಲಾಗಿದೆ. ಈ ನಿಟ್ಟಿನಲ್ಲಿ ಸುಮಾರು 50 ಸಾವಿರ ಕೋಟಿ ರೂ.ಗಿಂತ ಅಧಿಕ ಪಾಲಿಕೆ ಆಸ್ತಿ ವಿವಿಧ ಪ್ರಭಾವಿಗಳು ಮತ್ತು ಭೂಗಳ್ಳರ ಪಾಲಾಗಿದ್ದು, ಅದನ್ನು ಪರಿಶೀಲಿಸಿ ವಶಕ್ಕೆ ಪಡೆಯಬೇಕು. ಜತೆಗೆ, ಆರ್ಥಿಕ ದಿವಾಳಿ ಹಂತದಲ್ಲಿರುವ ಪಾಲಿಕೆಯನ್ನು ಕಾಪಾಡಲು, ವಶಕ್ಕೆ ಪಡೆದ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಸುಧಾರಣಾ ದಾರಿಗೆ ತರಬೇಕು ಎಂದು ಮಾಜಿ ಕಾರ್ಪೋರೇಟರ್ ಮೋಹನ್ ಕುಮಾರ್ ಒತ್ತಾಯಿಸಿದರು.
ಕಳೆದ ಕೆಲವು ವರ್ಷಗಳಿಂದ ಪಾಲಿಕೆಗೆ 110 ಹಳ್ಳಿಗಳನ್ನು ಸೇರಿಸಿ 198 ವಾರ್ಡ್ ಗಳಾಗಿ ಮಾಡಲಾಗಿದ್ದು, ಈವರೆಗೂ ಹಳ್ಳಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಈಗ ಪುನಃ ಹೊಸ ಸರ್ಕಾರ ಹೊಸ ಕಾಯ್ದೆಯಲ್ಲಿ 64 ಹಳ್ಳಿ ಸೇರಿಸಿ 225 ವಾರ್ಡ್ ಗಳನ್ನು ಮಾಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದ್ದು, ಈ ಕ್ರಮವನ್ನು ಕೈಬಿಡಬೇಕು. ಜತೆಗೆ, ಸುಂದರವಾಗಿರುವ ನಗರದಲ್ಲಿ ಜಾಹೀರಾತು ಮತ್ತು ಹೋರ್ಡಿಂಗ್ಸ್ ಗಳ ಅಳವಡಿಕೆ ಜಾರಿಗೊಳಿಸಿ ನಗರದ ಸೌಂದರ್ಯಕ್ಕೆ ಧಕ್ಕೆ ತರಬಾರದು ಎಂದು ಮಾಜಿ ಕಾರ್ಪೋರೇಟರ್ ಅಬ್ದುಲ್ ವಾಜಿದ್ ಒತ್ತಾಯಿಸಿದರು.
ವಾಸ್ತವಿಕ ಬಜೆಟ್ ಜಾರಿಗೊಳಿಸಿ: ಬಿಬಿಎಂಪಿಗೆ ಎಲ್ಲ ಮೂಲಗಳಿಂದ ಒಟ್ಟು 3.5 ಸಾವಿರ ಕೋಟಿ ರೂ.ಗಿಂತ ಕಡಿಮೆ ಆದಾಯ ಬರಲಿದೆ. ಆದರೆ, ಪ್ರತಿವರ್ಷ ಪಾಲಿಕೆಯಲ್ಲಿ 10 ಸಾವಿರ ಕೋಟಿ ರೂ.ಗಿಂತ ಅಧಿಕ ಬಜೆಟ್ ಮಂಡಿಸಲಾಗುತ್ತದೆ. ಆದರೆ, ಸರಕಾರ ಕೇವಲ ಶೇ.30 ಅನುದಾನ ನೀಡಿ ಕೈ ತೊಳೆದುಕೊಳ್ಳುತ್ತಿದ್ದು, ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಹೀಗಾಗಿ, ವಾಸ್ತವಿಕ ಆದಾಯದ ಆಧಾರದಲ್ಲಿ ಬಜೆಟ್ ಜಾರಿಗೊಳಿಸಬೇಕು ಎಂದು ಮಾಜಿ ಕಾರ್ಪೋರೇಟರ್ ಎಂ. ಶಿವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂವಾದದಲ್ಲಿ ಜನಾಗ್ರಹ ಸಂಸ್ಥೆಯ ಸ್ವಪ್ನ, ಶ್ರೀನಿವಾಸ್ ಅಲವಳ್ಳಿ, ಮಾಜಿ ಕಾರ್ಪೋರೇಟರ್‍ಗಳಾದ ಸಿ.ಆರ್. ಲಕ್ಷ್ಮೀನಾರಾಯಣ, ಪದ್ಮನಾಭರೆಡ್ಡಿ, ಜಿ.ಎಸ್. ನಾಗರಾಜ್, ಶ್ವೇತಾ ವಿಜಯ್‍ಕುಮಾರ್, ಶಿಲ್ಪಾ ಅವಿನಾಶ್, ಹ.ನಾ.ಭುವನೇಶ್ವರಿ ಭಾಗವಹಿಸಿದ್ದರು.
ಟ್ರಾಫಿಕ್, ರಸ್ತೆಗುಂಡಿ ಮುಖ್ಯ ಸಮಸ್ಯೆ:
ಜನಾಗ್ರಹ ಸಂಘಟನೆಯಿಂದ ನಗರದ ಮಸ್ಯೆಗಳ ಕುರಿತು ನಡೆಸಿದ ಸಮೀಕ್ಷೆ ಪ್ರಕಾರ ಸಂಚಾರದಟ್ಟಣೆ ಶೇ.30ರಷ್ಟು, ರಸ್ತೆಗುಂಡಿಗಳು ಶೇ.27ರಷ್ಟು, ಕಸದ ಸಮಸ್ಯೆ ಶೇ.17ರಷ್ಟು, ನೀರು ಸರಬರಾಜು ಶೇ.9ರಷ್ಟು, ಪ್ರವಾಹ ಶೇ.6ರಷ್ಟು, ಕೆರೆಗಳು ಶೇ.6ರಷ್ಟು ಹಾಗೂ ರಾಜಕಾಲುವೆ ಸಮಸ್ಯೆಗಳ ಬಗ್ಗೆ ಶೇ.5ರಷ್ಟು ಜನರು ಮುಖ್ಯ ಸಮಸ್ಯೆಯಾಗಿ ಗುರುತಿಸಿದ್ದಾರೆ. ಬಿಬಿಎಂಪಿ ಕಸದ ನಿರ್ವಹಣೆಗೆ ಶೇ.11ರಷ್ಟು ಉತ್ತಮ, ಶೇ.38ರಷ್ಟು ಸುಧಾರಿಸಿದೆ ಹಾಗೂ ಶೇ.51ರಷ್ಟು ಜನರು ಕಳಪೆ ನಿರ್ವಹಣೆಯಾಗಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿರುವ ಸಮೀಕ್ಷೆ ಬಗ್ಗೆ ಜನಾಗ್ರಹ ಸಂಘಟನೆಯ ಶ್ರೀನಿವಾಸ್ ಅಲವಳ್ಳಿ ಮಾಹಿತಿ ನೀಡಿದರು.
ಮುಂಬೈ ಸೇರಿ ವಿವಿಧ ಮಹಾನಗರ ಪಾಲಿಕೆಗಳಲ್ಲಿ ಒಟ್ಟಾರೆ ನಗರದ ಅಭಿವೃದ್ಧಿಗೆ ಪೂರಕವಾಗುವಂತೆ ಬಿಬಿಎಂಪಿಯಲ್ಲಿ ಮೇಯರ್ ಗಳ ಅಧಿಕಾರವನ್ನು 2.5 ವರ್ಷ (30 ತಿಂಗಳು)ಕ್ಕೆ ಏರಿಕೆ ಮಾಡಬೇಕು. ಇದರಿಂದ ಒಂದು ಸಮಗ್ರ ಯೋಜನೆ ಅಧ್ಯಯನ ಮಾಡಿ ಜಾರಿಗೊಳಿಸಲು ನೆರವಾಗಲಿದೆ.
- ಗೌತಮ್ ಕುಮಾರ್, ಬಿಬಿಎಂಪಿ ಮಾಜಿ ಮೇಯರ್







