ದ್ವಿತೀಯ ಏಕದಿನಕ್ಕೆ ಸ್ಟೀವ್ ಸ್ಮಿತ್ ಲಭ್ಯ

ಮ್ಯಾಂಚೆಸ್ಟರ್, ಸೆ.12: ನೆಟ್ ಅಭ್ಯಾಸದ ವೇಳೆ ಚೆಂಡು ತಲೆಗೆ ಬಡಿದ ಪರಿಣಾಮ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಆಸ್ಟ್ರೇಲಿಯದ ಸ್ಟಾರ್ ಆಟಗಾರ ಸ್ಟೀವ್ ಸ್ಮಿತ್ ಶನಿವಾರ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಿದ್ದು, ರವಿವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಎರಡನೇ ಏಕದಿನಕ್ಕೆ ಲಭ್ಯವಿರಲಿದ್ದಾರೆ. ಮೊದಲ ಏಕದಿನ ಪಂದ್ಯಕ್ಕಿಂತ ಮೊದಲು ನಡೆದ ನೆಟ್ ಪ್ರಾಕ್ಟೀಸ್‌ನ ವೇಳೆ ಕೋಚಿಂಗ್ ಸಿಬ್ಬಂದಿಯ ಸದಸ್ಯನ ಥ್ರೋ-ಡೌನ್ ಎಸೆತವು ಸ್ಮಿತ್ ತಲೆಗೆ ತಗಲಿತ್ತು. ವಿಶ್ವದ ನಂ.1 ಟೆಸ್ಟ್ ಬ್ಯಾಟ್ಸ್ ಮನ್ ಸ್ಮಿತ್ ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಮೊದಲ ಏಕದಿನ ಪಂದ್ಯದ ಅಂತಿಮ 11ರ ಬಳಗದಿಂದ ಸ್ಮಿತ್‌ರನ್ನು ಹೊರಗಿಡಲಾಗಿತ್ತು.
‘‘ಸ್ಮಿತ್ ಶುಕ್ರವಾರ ಹಾಗೂ ಶನಿವಾರ ಮಾಡಿರುವ ಪರೀಕ್ಷೆಗಳಲ್ಲಿ ಪಾಸಾಗಿದ್ದಾರೆ. ಇದೊಂದು ಉತ್ತಮ ನಿರ್ಧಾರವಾಗಿದೆ. ತಲೆಗೆ ಸಂಬಂಧಿಸಿದ ಗಾಯಕ್ಕೆ ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳುವ ಅಗತ್ಯ ಇಲ್ಲ’’ ಎಂದು ಆಲ್‌ರೌಂಡರ್ ಮಿಚೆಲ್ ಮಾರ್ಷ್ ಹೇಳಿದ್ದಾರೆ.
ಕಳೆದ ವರ್ಷ ಆ್ಯಶಸ್ ಸರಣಿಯ ವೇಳೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ನ ಜೋಫ್ರಾ ಅರ್ಚರ್ ಅವರ ಬೌನ್ಸರ್‌ವೊಂದು ಸ್ಮಿತ್ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಹೀಗಾಗಿ ಅವರು ಆ ಟೆಸ್ಟ್‌ನ 2ನೇ ಇನಿಂಗ್ಸ್‌ನಲ್ಲಿ ಆಡಿರಲಿಲ್ಲ.







