ಸಿಸಿಬಿಯನ್ನು ಮತ್ತಷ್ಟು ಬಲಗೊಳಿಸಲು ಕ್ರಮ: ಗೃಹ ಸಚಿವ ಬೊಮ್ಮಾಯಿ
![ಸಿಸಿಬಿಯನ್ನು ಮತ್ತಷ್ಟು ಬಲಗೊಳಿಸಲು ಕ್ರಮ: ಗೃಹ ಸಚಿವ ಬೊಮ್ಮಾಯಿ ಸಿಸಿಬಿಯನ್ನು ಮತ್ತಷ್ಟು ಬಲಗೊಳಿಸಲು ಕ್ರಮ: ಗೃಹ ಸಚಿವ ಬೊಮ್ಮಾಯಿ](https://www.varthabharati.in/sites/default/files/images/articles/2020/09/13/258966-1599995881.jpg)
ಬೆಂಗಳೂರು, ಸೆ.13: ಸ್ಯಾಂಡಲ್ವುಡ್ಗೆ ಡ್ರಗ್ಸ್ ದಂಧೆ ಆರೋಪ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಸಿಬಿ ವಿಭಾಗವನ್ನು ಮತ್ತಷ್ಟು ಬಲಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ರವಿವಾರ ಇಲ್ಲಿನ ಆರ್.ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಭೀರ ಅಪರಾಧ ಪ್ರಕರಣಗಳ ಸಂಬಂಧ ಹೆಚ್ಚಿನ ಒತ್ತಡ ಸಿಸಿಬಿ ಮೇಲೆ ಬಿದಿದ್ದು, ಇದರ ವ್ಯಾಪ್ತಿಯನ್ನು, ಇನ್ನಷ್ಟು ಬಲಗೊಳಿಸಬೇಕಿದೆ. ಅದಕ್ಕೆ ಅಧಿಕಾರಿಗಳನ್ನು ನಿಯೋಜಿಸಿ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದರು.
ಡ್ರಗ್ಸ್ ಗೆ ಯುವಪೀಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸಮಾಜ ಕೂಡ ಜಾಗೃತವಾಗಿರಬೇಕು. ಹಾಗಾಗಿ ಎಲ್ಲರ ಸಲಹೆ-ಸೂಚನೆಗಳನ್ನು ಆಲಿಸುತ್ತೇವೆ. ಯಾವುದೇ ಮೂಲೆಯಿಂದ ಮಾಹಿತಿ ಬಂದರೂ, ಮಾಧ್ಯಮಗಳು ಸೇರಿದಂತೆ ಯಾವುದೇ ಕಡೆಯಿಂದ ಏನೇ ಹೇಳಿಕೆಗಳು ದೊರೆತರೂ, ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ತಿಳಿಸಿದರು.
ಗಡಿ ರಾಜ್ಯಗಳಿಂದ ಬರುವ ಮಾದಕ ವಸ್ತುಗಳ ನಿಯಂತ್ರಣಕ್ಕೆ ಈ ವಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಗಡಿ ಜಿಲ್ಲೆ ಪೊಲೀಸರಿಗೆ ನಿರ್ದೇಶನ ಕೊಡುತ್ತೇವೆ. ಡ್ರಗ್ಸ್ ದಂಧೆ ಪ್ರಕರಣದ ತನಿಖೆಯಲ್ಲಿ ಗುಪ್ತಚರ ಇಲಾಖೆಯ ಪೊಲೀಸರ ಬಳಕೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.