ಕನ್ಯಾನದಲ್ಲಿ ಅತಿಕ್ರಮಣ ರಸ್ತೆ ತೆರವು: ಸಂಚಾರಕ್ಕೆ ಮುಕ್ತ

ಕುಂದಾಪುರ, ಸೆ.13: ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದರು ಎನ್ನಲಾದ ರಸ್ತೆಯನ್ನು ಕಂದಾಯ ನಿರೀಕ್ಷಕರ ನೇತೃತ್ವದಲ್ಲಿ ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟ ಘಟನೆ ಶುಕ್ರವಾರ ಹಟ್ಟಿಯಂಗಡಿ ಗ್ರಾಪಂ ವ್ಯಾಪ್ತಿಯ ಕನ್ಯಾನ ಗ್ರಾಮದಲ್ಲಿ ನಡೆದಿದೆ.
ಕನ್ಯಾನ ಗ್ರಾಮದ ತೋಟಬೈಲು ಪ್ರದೇಶದ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ಸಂಪರ್ಕ ರಸ್ತೆಯಿಂದ ತೋಟಬೈಲು, ಗಾಣಿಗರ ಕೇರಿಗೆ ಹೋಗುವ ಸಂಪರ್ಕ ರಸ್ತೆಯನ್ನು ಸ್ಥಳೀಯರೊಬ್ಬರು ಅತಿಕ್ರಮಿಸಿದ್ದರು ಎಂದು ಆರೋಪಿಸಲಾಗಿತ್ತು. ಇದರಿಂದ ಇಲ್ಲಿನ 35ಕ್ಕೂ ಅಧಿಕ ಮನೆಯವರು ರಸ್ತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸ್ಥಳೀಯರು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ರಾಘವೇಂದ್ರ ಡಿ., ಬಂದ್ ಮಾಡಲಾದ ರಸ್ತೆಯನ್ನು ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಿದರು. ಈ ಸಂದರ್ಭದಲ್ಲಿ ಹಟ್ಟಿಯಂಗಡಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷ ರಾಜೀವ ಶೆಟ್ಟಿ, ನಿಕಟಪೂರ್ವ ಸದಸ್ಯರಾದ ಸಂತೋಷ ಶೆಟ್ಟಿ ತೋಟಬೈಲು, ಗ್ರಾಮ ಕರಣಿಕರಾದ ಮಹೇಶ, ಸೋಮಪ್ಪ ಹಾಗೂ ಗ್ರಾಮ ಸಹಾಯಕು, ಸ್ಥಳೀಯರು ಉಪಸ್ಥಿತರಿದ್ದರು.





